ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಚರಿಸುತ್ತಿರುವ ಸರಸಂಘಚಾಲಕ ಮೋಹನ್ ಭಾಗವತ್ ಅವರು, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತವು ಮೂಲಭೂತವಾಗಿ ಒಂದು ಹಿಂದೂ ರಾಷ್ಟ್ರ. ಈ ಸತ್ಯವನ್ನು ಒಪ್ಪಿಕೊಳ್ಳಲು ಅಥವಾ ಸಾಬೀತುಪಡಿಸಲು ಯಾವುದೇ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಸೂರ್ಯನ ಉದಯಕ್ಕೆ ಸಂವಿಧಾನ ಬೇಕೇ ?
ಕೋಲ್ಕತ್ತಾದಲ್ಲಿ ನಡೆದ ‘100 ವ್ಯಾಖ್ಯಾನ ಮಾಲಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂಬುದು ಸಾರ್ವಕಾಲಿಕ ಸತ್ಯ. ಅದಕ್ಕೆ ಸಾಂವಿಧಾನಿಕ ಮೊಹರು ಬೇಕೇ ? ಹಾಗೆಯೇ ಹಿಂದೂಸ್ತಾನವು ಹಿಂದೂ ರಾಷ್ಟ್ರ ಎಂಬುದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸತ್ಯ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ, ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವ ಮತ್ತು ಪೂರ್ವಜರ ವೈಭವವನ್ನು ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಯೂ ಈ ರಾಷ್ಟ್ರದ ಅವಿಭಾಜ್ಯ ಅಂಗ ಎಂದು ಭಾರತದ ಅಸ್ತಿತ್ವ ಮತ್ತು ಹಿಂದುತ್ವದ ನಡುವಿನ ಸಂಬಂಧವನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಮತ್ತು ಜಾತ್ಯತೀತತೆ
ಸಂವಿಧಾನದ ಕುರಿತು ಮಾತನಾಡಿದ ಅವರು, ಭವಿಷ್ಯದಲ್ಲಿ ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತಂದು ಭಾರತವನ್ನು ಅಧಿಕೃತವಾಗಿ ಹಿಂದೂ ರಾಷ್ಟ್ರ ಎಂದು ಘೋಷಿಸಿದರೆ ನಮಗೆ ಅಭ್ಯಂತರವಿಲ್ಲ. ಆದರೆ, ಅಂತಹ ಘೋಷಣೆ ಇಲ್ಲದಿದ್ದರೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ ಎಂದರು. ಇದೇ ವೇಳೆ ಇತಿಹಾಸವನ್ನು ಸ್ಮರಿಸಿದ ಅವರು, ಜಾತ್ಯತೀತ (Secular) ಎಂಬ ಪದವು ಮೂಲ ಸಂವಿಧಾನದ ಪೀಠಿಕೆಯಲ್ಲಿ ಇರಲಿಲ್ಲ, ಅದನ್ನು 1976ರ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎಂಬುದನ್ನು ನೆನಪಿಸಿದರು.
ಸಂಘವು ಮುಸ್ಲಿಂ ವಿರೋಧಿಯಲ್ಲ
ಸಂಘವು ಕೇವಲ ಹಿಂದೂಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ ಮತ್ತು ಪ್ರಖರ ರಾಷ್ಟ್ರೀಯತೆಯನ್ನು ನಂಬುತ್ತದೆ. ಆದರೆ ನಾವು ಎಂದಿಗೂ ಮುಸ್ಲಿಂ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು. ಸಂಘದ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಜನರು ಒಮ್ಮೆ ಶಾಖೆಗಳಿಗೆ ಅಥವಾ ಕಚೇರಿಗಳಿಗೆ ಭೇಟಿ ನೀಡಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೆ, ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣವಲ್ಲ ಎಂದು ಹೇಳಿದರು.
ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಗೆ ಕಳವಳ
ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾಗವತ್ ತೀವ್ರ ಆತಂಕ ವ್ಯಕ್ತಪಡಿಸಿದರು. ಭಾರತ ವಿರೋಧಿ ಪ್ರತಿಭಟನೆಗಳ ಹೆಸರಿನಲ್ಲಿ ಹಿಂದೂಗಳನ್ನು ಗುರಿ ಮಾಡುತ್ತಿರುವುದು ಖಂಡನೀಯ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಅಲ್ಲಿನ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಿಶ್ವಗುರು ಭಾರತದ ಗುರಿ
ಭಾರತವು ಕೇವಲ ಒಂದು ಭೂಪಟವಲ್ಲ, ಅದು ಒಂದು ಜೀವನ ವಿಧಾನ ಮತ್ತು ಸಂಪ್ರದಾಯ. ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿ ಮಾಡಲು ಸಮಾಜವನ್ನು ಸಿದ್ಧಪಡಿಸುವುದೇ ಸಂಘದ ಏಕೈಕ ಗುರಿ. ನಾವು ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ, ಬದಲಿಗೆ ಭಾರತದ ಮೌಲ್ಯಗಳು ಮತ್ತು ಚಾರಿತ್ರ್ಯವನ್ನು ಕಾಪಾಡುವುದು ನಮ್ಮ ಗುರಿಯಾಗಿದೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.





