ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ, ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ದಾಳಿಯು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಮತ್ತೊಂದು ಉದಾಹರಣೆ ಎಂದು ಕೇಜ್ರಿವಾಲ್ ದೂಷಿಸಿದ್ದಾರೆ. “ಎಎಪಿಯನ್ನು ಗುರಿಯಾಗಿಸಿ ಬಿಜೆಪಿಯಂತೆ ಯಾವ ಪಕ್ಷವೂ ಇದುವರೆಗೆ ಕಾರ್ಯನಿರ್ವಹಿಸಿಲ್ಲ. ಕೇಂದ್ರದ ಮೋದಿ ಸರ್ಕಾರದ ತಪ್ಪು ನೀತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಎಎಪಿ ಧ್ವನಿಯಾಗಿದೆ. ನಮ್ಮ ಧ್ವನಿಯನ್ನು ದಮನ ಮಾಡಲು ಬಿಜೆಪಿ ಯತ್ನಿಸುತ್ತಿದೆ, ಆದರೆ ಅದು ಸಾಧ್ಯವಿಲ್ಲ,” ಎಂದು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಯ ದಾಳಿಗಳಿಗೆ ಎಎಪಿ ಭಯಪಡುವುದಿಲ್ಲ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. “ನಾವು ಈ ಹಿಂದಿನಂತೆಯೇ ಕೇಂದ್ರದ ತಪ್ಪು ನೀತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ,” ಎಂದು ಅವರು ಗುಡುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪದವಿ ನಕಲಿ ಎಂಬ ವಿವಾದವು ಸೋಮವಾರ ದೊಡ್ಡ ಸುದ್ದಿಯಾಗಿ ಹೊರಬಂದಿದ್ದು, ಈ ವಿಷಯದಿಂದ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಸಲಾಗಿದೆ ಎಂದು ಎಎಪಿ ಆರೋಪಿಸಿದೆ. “ಮೋದಿಯವರು ತಾವು ಪಡೆದಿದ್ದಾರೆ ಎನ್ನಲಾದ ಪದವಿ ನಕಲಿಯಾಗಿದೆ. ದೇಶದ ಜನತೆಗೆ ಅವರು ಸುಳ್ಳು ಹೇಳಿದ್ದಾರೆ,” ಎಂದು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.