ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕ ವಿರುದ್ಧ ಪ್ರತಿಭಟನೆ: ಮಸೂದೆಯ ಪ್ರತಿ ಸುಟ್ಟು ಹಾಕಿದ ಸಿಎಂ ಸ್ಟಾಲಿನ್‌

ಚೆನ್ನೈ: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ (ಡೆಲಿಮಿಟೇಶನ್) ವಿಧೇಯಕದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೀವ್ರ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಅವರು ವಿಧೇಯಕದ ಪ್ರತಿಯನ್ನು ಸುಟ್ಟು ಮತ್ತು ಕಪ್ಪು ಧ್ವಜ ಹಾರಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. 2011ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುವ್ಯವಸ್ಥೆಗೊಳಿಸುವ ಕೇಂದ್ರದ ನಿರ್ಧಾರವು ತಮಿಳುನಾಡಿನ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಪ್ಪು ಕಾನೂನು’ ಎದುರು ಹೋರಾಟ

ಸಾಮಾಜಿಕ ಜಾಲತಾಣದಲ್ಲಿ ಸ್ಟಾಲಿನ್ ಅವರು ತಮ್ಮ ಪ್ರತಿಭಟನೆಯ ವಿಡಿಯೋ ಹಂಚಿಕೊಂಡಿದ್ದಾರೆ. “ಹಿಂದೆ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ಎದ್ದಿದ್ದ ಪ್ರತಿಭಟನೆ ಕಿಚ್ಚು ದೆಹಲಿಯನ್ನೇ ನಡುಗಿಸಿತ್ತು. ಈಗ ತಮಿಳರನ್ನು ಸ್ವಂತ ನೆಲದಲ್ಲೇ ನಿರಾಶ್ರಿತರನ್ನಾಗಿ ಮಾಡಲು ಹೊರಟಿರುವ ಈ ‘ಕಪ್ಪು ಕಾನೂನಿನ’ ವಿರುದ್ಧವೂ ಅಂತಹದ್ದೇ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.

ವಿಧೇಯಕದಲ್ಲಿ ಏನಿದೆ?

ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೊಳಿಸಲು ಮತ್ತು 2029ರ ಚುನಾವಣೆಗೂ ಮುನ್ನ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರುತ್ತಿದೆ. ಪ್ರಸ್ತಾವಿತ ಯೋಜನೆಯಂತೆ ಲೋಕಸಭೆಯ ಒಟ್ಟು ಸೀಟುಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಆದರೆ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳಿಗೆ ಈ ಪುನರ್ವಿಂಗಡಣೆಯಿಂದ ರಾಜಕೀಯ ಪ್ರಾತಿನಿಧ್ಯ ಕುಸಿಯಬಹುದು ಎಂಬ ಆತಂಕ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ನಾಯಕರಲ್ಲಿ ಮನೆಮಾಡಿದೆ.

ತಮಿಳುನಾಡಿನಾದ್ಯಂತ ಪ್ರತಿಭಟನೆ

ಈ ಪ್ರತಿಭಟನೆಯ ಭಾಗವಾಗಿ ತಮಿಳುನಾಡಿನಾದ್ಯಂತ ಸಚಿವರು ಮತ್ತು ಡಿಎಂಕೆ ಮುಖಂಡರು ತಮ್ಮ ನಿವಾಸಗಳ ಮೇಲೆ ಕಪ್ಪು ಧ್ವಜ ಹಾರಿಸಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುತ್ತಿರುವುದನ್ನು ವಿರೋಧಿಸಿರುವ ಸ್ಟಾಲಿನ್, ರಾಜ್ಯದ ಹಕ್ಕುಗಳ ರಕ್ಷಣೆಗಾಗಿ ಜನರು ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ. ಅಖಿಲೇಶ್ ಯಾದವ್ ಮತ್ತು ಅಶೋಕ್ ಗೆಹೋಟ್ ಸೇರಿದಂತೆ ಉತ್ತರ ಭಾರತದ ಹಲವು ನಾಯಕರು ಕೂಡ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಮತ್ತು ರಾಜಕೀಯ ನಾಯಕರು ಕೂಡ ಈ ಮಸೂದೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Exit mobile version