ನವದೆಹಲಿ, ಮೇ 20: ಒಂದು ಕಾಲದಲ್ಲಿ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರ ಮೆಚ್ಚಿನ ಚಾಕೊಲೇಟ್ ಆಗಿದ್ದ ಪಾರ್ಲೆ ಕಂಪನಿಯ ‘ಮೆಲೋಡಿ’ ಇದೀಗ ಮತ್ತೆ ಸುದ್ದಿಯಲ್ಲಿದೆ. 90ರ ದಶಕದ ಜನರ ಬಾಲ್ಯದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿರುವ ಈ ಚಾಕೊಲೇಟ್‌ಗೆ ಹೊಸ ಜನಪ್ರಿಯತೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೋದಿ ಮೆಲೋಡಿ ಚಾಕೊಲೇಟ್ ಉಡುಗೊರೆಯಾಗಿ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮೆಲೋಡಿ ಮತ್ತೆ ಟ್ರೆಂಡಿಂಗ್ ಸೃಷಿಸಿದೆ.
ಇತ್ತೀಚೆಗೆ ಇಟಲಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಕಂಪನಿಯ ಪ್ರಸಿದ್ಧ ಮೆಲೋಡಿ ಚಾಕೊಲೇಟ್ ಪ್ಯಾಕ್ ಅನ್ನು ಉಡುಗೊರೆಯಾಗಿ ನೀಡಿದರು. ಈ ಕ್ಷಣವನ್ನು ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು, ವಿಡಿಯೊಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಭಾರತೀಯ ನೆಟ್ಟಿಗರು ಈ ಕ್ಷಣವನ್ನು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಮತ್ತು ಮೆಲೋನಿ ನಡುವಿನ ಸ್ನೇಹ ಈಗಾಗಲೇ ಜಾಗತಿಕ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇವರಿಬ್ಬರ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ‘ಮೆಲೋಡಿ’ ಎಂದು ಕರೆಯುವುದು ಸಹ ವೈರಲ್ ಟ್ರೆಂಡ್ ಆಗಿತ್ತು. ಇದೇ ಹಿನ್ನೆಲೆಯಲ್ಲೇ ಮೋದಿ ನೀಡಿದ ಮೆಲೋಡಿ ಚಾಕೊಲೇಟ್ ಉಡುಗೊರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗ್ತಿದೆ.
ಈ ಘಟನೆಯ ನಂತರ ಪಾರ್ಲೆ ಕಂಪನಿಯ ಮೆಲೋಡಿ ಚಾಕೊಲೇಟ್ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಗೂಗಲ್ ಟ್ರೆಂಡ್ಸ್ ವರದಿ ಪ್ರಕಾರ ‘Melody Chocolate’ ಎಂಬ ಪದದ ಹುಡುಕಾಟದಲ್ಲಿ ಶೇಕಡಾ 1200ರಷ್ಟು ಏರಿಕೆಯಾಗಿದೆ. ‘Parle Melody’ ಮತ್ತು ‘Melody Toffee’ ಎಂಬ ಹುಡುಕಾಟಗಳಲ್ಲೂ ಹೆಚ್ಚಳ ಕಂಡು ಬಂದಿದೆ. ಇದರಿಂದ ಹಲವು ವರ್ಷಗಳ ಬಳಿಕ ಮೆಲೋಡಿ ಮತ್ತೆ ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ಪಡೆದುಕೊಂಡಿದೆ.
Thank you @narendramodi 🙏🏻 https://t.co/LZK960JwFl pic.twitter.com/TBjkB4761C
— Parle Products (@ParleFamily) May 20, 2026
ಈ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿರುವ ಪಾರ್ಲೆ ಪ್ರಾಡಕ್ಟ್ಸ್ (Parle Products) ಸಂಸ್ಥೆ ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದೆ. ಕಂಪನಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, “ಜಾಗತಿಕ ವೇದಿಕೆಯಲ್ಲಿ ಮೆಲೋಡಿಯನ್ನು ಪರಿಚಯಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು. ಭಾರತೀಯ ಉತ್ಪನ್ನಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ” ಎಂದು ಬರೆದುಕೊಂಡಿದೆ.
ಪಾರ್ಲೆ ಪ್ರಾಡಕ್ಟ್ಸ್‌ನ ಉಪಾಧ್ಯಕ್ಷ ಹಾಗೂ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮಾಯಾಂಕ್ ಶಾ ಕೂಡ ಪ್ರತಿಕ್ರಿಯೆ ನೀಡಿದ್ದು, “ಭಾರತೀಯ ಬ್ರ್ಯಾಂಡ್‌ಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಒಂದು ಸಾಮಾನ್ಯ ಟಾಫಿಯೂ ದೇಶದ ಸಾಂಸ್ಕೃತಿಕ ಗುರುತಾಗಿ ಹೊರಹೊಮ್ಮಬಹುದು ಎಂಬುದನ್ನು ಇದು ತೋರಿಸಿದೆ” ಎಂದಿದ್ದಾರೆ.
