ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಭೀಕರ ಘಟನೆಯೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮನೆಯೊಳಗೆ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿರುವುದು ಪತ್ತೆಯಾಗಿದೆ.
35 ವರ್ಷದ ಮನೀಶ್ ಕುಮಾರ್ ಎಂಬುವವರು ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ದಂಪತಿ ತಮ್ಮ ಮೂವರು ಪುಟ್ಟ ಮಕ್ಕಳನ್ನು ಹತ್ಯೆಗೈದಿದ್ದಾರೆ ಎನ್ನುವುದು ಹೊರಬಂದಿದೆ.
ಮೃತ ಮಕ್ಕಳನ್ನು ಹನಿ (8), ಪ್ರಿಯಾಂಶಿ (5) ಮತ್ತು ಪ್ರತೀಕ್ (3) ಎಂದು ಗುರುತಿಸಲಾಗಿದೆ. ಈ ದಂಪತಿ 2018ರಲ್ಲಿ ವಿವಾಹವಾಗಿದ್ದು, ಮದುವೆಯ ಬಳಿಕ ಸಂತೋಷದಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ..
ಕತ್ತು ಹಿಸುಕಿ ಮಕ್ಕಳ ಹತ್ಯೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ಮೊದಲು ತಮ್ಮ ಮೂವರು ಮಕ್ಕಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ನಂತರ ಮನೀಶ್ ಕುಮಾರ್ ವಿದ್ಯುತ್ ವೈರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ನಡೆದ ಮನೆಯೊಳಗೆ ಐವರ ಮೃತದೇಹಗಳು ಪತ್ತೆಯಾಗಿದ್ದು, ನೆರೆಹೊರೆಯವರು ಮನೆ ಬಾಗಿಲು ತೆರೆದಿರದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಸೆಲ್ಫಿ ವಿಡಿಯೋ ಮತ್ತು ಡೆತ್ ನೋಟ್ ಪತ್ತೆ
ಆತ್ಮಹತ್ಯೆಗೂ ಮುನ್ನ ಮನೀಶ್ ಕುಮಾರ್ ಸೆಲ್ಫಿ ವಿಡಿಯೋ ಮಾಡಿದ್ದು, ಆ ವಿಡಿಯೋದಲ್ಲಿ “ನಮ್ಮ ಸಾವಿಗೆ ನಾವೇ ಕಾರಣ, ಯಾರೂ ಜವಾಬ್ದಾರರಲ್ಲ” ಎಂದು ಹೇಳಿರುವುದು ತಿಳಿದುಬಂದಿದೆ. ಅಲ್ಲದೆ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದಲ್ಲಿಯೂ ಇದೇ ಮಾತುಗಳನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ವಿಡಿಯೋ ಮತ್ತು ಡೆತ್ ನೋಟ್ ಆಧಾರವಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಿಯತಮೆಯ ಲಗ್ನ ಪತ್ರಿಕೆ ನೋಡಿ ಬಾಡಿ ಬಿಲ್ಡರ್ ಆತ್ಮಹ*ತ್ಯೆ
ಬೆಂಗಳೂರು: ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಬೇರೆಯವನೊಂದಿಗೆ ಮದುವೆಯಾಗುತ್ತಿದ್ದಾಳೆಂಬ ಸುದ್ದಿಯನ್ನು ಸಹಿಸಲಾಗದೆ ಬೆಂಗಳೂರಿನ ಖ್ಯಾತ ಬಾಡಿ ಬಿಲ್ಡರ್ ನೇಣಿಗೆ ಶರಣಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.
ಪ್ರಕರಣದ ವಿವರ:
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದೆ. ಕಿರಣ್ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕಿರಣ್, ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಮುಂಬರುವ ಫೆಬ್ರವರಿ 14 ರ ‘ವ್ಯಾಲೆಂಟೈನ್ಸ್ ಡೇ’ (ಪ್ರೇಮಿಗಳ ದಿನ) ಸಂದರ್ಭದಲ್ಲಿ ತನ್ನ ಪ್ರೇಯಸಿಗೆ ವಿಶೇಷ ಉಡುಗೊರೆಯನ್ನು ನೀಡಿ ಸರ್ಪ್ರೈಸ್ ಕೊಡಲು ಕಿರಣ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ, ಬೇರೊಬ್ಬನ ಜೊತೆ ಮದುವೆಯಾಗಲು ಸಿದ್ದಳಾಗುತ್ತಿದ್ದಳು.
ಯುವತಿಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಯವಾಗಿದ್ದು ಮಾತ್ರವಲ್ಲದೆ, ಆಕೆ ಕಿರಣ್‌ಗೆ ತನ್ನ ಮದುವೆಯ ಲಗ್ನಪತ್ರಿಕೆ ಮತ್ತು ಮದುವೆಗಾಗಿ ಖರೀದಿಸಿದ ಹೊಸ ಸೀರೆಯನ್ನು ತೋರಿಸಿದ್ದಾಳೆ. ಇದರಿಂದ ತೀವ್ರ ಮನನೊಂದಿದ್ದ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮನನೊಂದ ಕಿರಣ್ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತನ್ನ ಮನೆಗೆ ಬಂದು ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಗನನ್ನು ಕಳೆದುಕೊಂಡ ಪೋಷಕರು ಈಗ ಯುವತಿಯ ಕುಟುಂಬದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೃತ ಕಿರಣ್ ತಾಯಿಯ ಆರೋಪದಂತೆ, ಕಿರಣ್ ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಸುಮಾರು 50 ಲಕ್ಷ ರೂಪಾಯಿ ಸಾಲ ಹೊಂದಿದ್ದರು. ಈ ವಿಚಾರ ಕಿರಣ್‌ಗೆ ತಿಳಿದಾಗ, ನಿಮ್ಮ ಎಲ್ಲಾ ಸಾಲವನ್ನು ನಾನೇ ತೀರಿಸುತ್ತೇನೆ, ನನ್ನ ಪ್ರೇಯಸಿಯನ್ನು ನನಗೆ ಕೊಟ್ಟು ಮದುವೆ ಮಾಡಿ ಎಂದು ಭರವಸೆ ನೀಡಿದ್ದನಂತೆ. ಕಳೆದ ಎಂಟು ತಿಂಗಳ ಹಿಂದೆಯೇ ಯುವತಿ ಕಿರಣ್ ಮನೆಗೆ ಬಂದು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಳು. ತನಗಿಂತ ಎರಡು ವರ್ಷ ದೊಡ್ಡವಳಾಗಿದ್ದರೂ ಕಿರಣ್ ಆಕೆಯನ್ನು ಮನಸ್ಪೂರ್ತಿಯಾಗಿ ಪ್ರೀತಿಸಿ ಮದುವೆಯಾಗಲು ಇಚ್ಚಿಸಿದ್ದ.
ಕಳೆದ ಒಂದು ವಾರದಲ್ಲಿ ಯುವತಿಯ ಕುಟುಂಬದವರು ಆಕೆಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಹಣ ಪಡೆದು ಈಗ ಮತ್ತೊಬ್ಬನ ಜೊತೆ ಮದುವೆಯಾಗಿ ನನ್ನ ಮಗನಿಗೆ ಮೋಸ ಮಾಡಿದ್ದಾರೆ ಎಂದು ಕಿರಣ್ ಪೋಷಕರು ಆರೋಪ ಮಾಡಿದ್ದಾರೆ.
ನಿನ್ನೆ ಸಂಜೆ ಕಿರಣ್ ತನ್ನ ತಾಯಿಯ ಬಳಿ ಹೋಗಿ ಬಿಳಿ ಹಾಳೆ (White Sheet) ಮತ್ತು ಪೆನ್ ಕೇಳಿದ್ದಾನೆ. ಮಗನ ವರ್ತನೆಯಿಂದ ಅನುಮಾನಗೊಂಡ ತಾಯಿ, ಯಾಕಪ್ಪಾ ವೈಟ್ ಪೇಪರ್ ? ಎಂದು ಪ್ರಶ್ನಿಸಿದಾಗ, ಕಿರಣ್ ಹೆದರಬೇಡಮ್ಮ, ಸುಮ್ಮನೆ ಫೈನಾನ್ಸ್ ಲೆಕ್ಕ ಬರೆಯಬೇಕು ಅಷ್ಟೇ ಎಂದು ಸುಳ್ಳು ಹೇಳಿ ಸಮಾಧಾನಪಡಿಸಿದ್ದಾನೆ. ಆದರೆ ಅದೇ ಹಾಳೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಿರಣ್ ಬರೆದಿಟ್ಟಿರುವ ಡೆತ್ ನೋಟ್ ಈಗ ಪೊಲೀಸರ ವಶದಲಿದ್ದು, ಅದರಲ್ಲಿ ಪ್ರೀತಿಸಿದ ಯುವತಿ ಹಾಗೂ ಆಕೆಯ ಕುಟುಂಬಸ್ಥರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಮಗನ ಸಾವಿಗೆ ಈ ಯುವತಿಯೇ ನೇರ ಕಾರಣ ಎಂದು ಪೋಷಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
