ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಡೆಸಿದ ರ‍್ಯಾಲಿಯ ಬಳಿಕ ನಡೆದ ‘ಶುದ್ಧೀಕರಣ ಹೋಮ’ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಆಗಸ್ಟ್ 8ರಂದು ಖರ್ಗೆ ಅವರ ನೇತೃತ್ವದಲ್ಲಿ ರ‍್ಯಾಲಿ ನಡೆದಿದ್ದ ಇದೇ ಮೈದಾನದಲ್ಲಿ ಆಗಸ್ಟ್ 10ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯಿಂದ ಹೋಮ ನಡೆಸಲಾಗಿತ್ತು. ಈ ಬೆಳವಣಿಗೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕಾಗಿಯೇ ಇಂತಹ ಕಾರ್ಯಕ್ರಮ ನಡೆಸಲಾಗಿದೆ ಎಂದು ಆರೋಪಿಸಿದೆ.
ಈ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ದಲಿತರಿಗೆ ಸಮಾನ ಅವಕಾಶ ಮತ್ತು ಗೌರವ ಸಿಗುತ್ತಿಲ್ಲ ಎಂಬ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ತಮ್ಮ ರ‍್ಯಾಲಿ ನಡೆದ ಸ್ಥಳವನ್ನು ಶುದ್ಧೀಕರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ತಮ್ಮ ಭಾಷಣದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಬದಲಾಗಿ ಸರ್ಕಾರದ ಸಮಸ್ಯೆಗಳು ಮತ್ತು ಜನರ ವಿಚಾರಗಳ ಕುರಿತು ಮಾತ್ರ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ಶುದ್ಧೀಕರಣದ ಹೆಸರಿನಲ್ಲಿ ಹೋಮ ನಡೆಸಿರುವುದು ಜಾತಿ ಆಧಾರಿತ ಮನೋಭಾವಕ್ಕೆ ಉತ್ತೇಜನ ನೀಡುವಂತದ್ದು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್ ಕೂಡ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶುದ್ಧೀಕರಣ ಹೋಮ ನಡೆಸಿದ ಶ್ರೀರಾಮ ಸೇನಾ ಸಂಘಟನೆಗೆ ಬಿಜೆಪಿಯೊಂದಿಗೆ ಸಂಪರ್ಕವಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿಹಾಕಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಜೆ.ಪಿ. ನಡ್ಡಾ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತಮಗೆ ಗೌರವವಿದೆ ಎಂದು ಹೇಳುತ್ತಲೇ ನಡೆದಿರುವ ಶುದ್ಧೀಕರಣ ಕಾರ್ಯಕ್ರಮವನ್ನು ಖಂಡಿಸಿದರು. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ. ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಇಂತಹ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಶುದ್ಧೀಕರಣ ಹೋಮ ನಡೆಸಿದ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯ ಪದಾಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಾಮಲೀಲಾ ಮೈದಾನವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಆದ್ದರಿಂದ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಈ ಮೈದಾನವನ್ನು ನೀಡಬಾರದು ಎಂಬುದು ತಮ್ಮ ನಿಲುವು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಖರ್ಗೆ ಅವರ ರ‍್ಯಾಲಿಯಲ್ಲಿ ಸನಾತನ ಧರ್ಮದ ಭಾವನೆಗಳಿಗೆ ನೋವುಂಟು ಮಾಡುವ ಘೋಷಣೆಗಳು ಕೇಳಿಬಂದಿದ್ದವು ಎಂದು ಬಿಜೆಪಿ ಆರೋಪಿಸಿದೆ. ಆದರೆ ಕಾಂಗ್ರೆಸ್ ಈ ಆರೋಪವನ್ನು ನಿರಾಕರಿಸಿದೆ. ರ‍್ಯಾಲಿಯಲ್ಲಿ ಯಾವುದೇ ಧರ್ಮ ಅಥವಾ ಸಮುದಾಯವನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
