ಬಸ್‌‌ನಲ್ಲಿ ಮಹಿಳೆ ಕೈಗೆ ಮುತ್ತಿಟ್ಟು ಧರ್ಮದೇಟು ತಿಂದ ಅಂಕಲ್‌

Untitled design 2026 08 13T132051.711

ಕೋಲಾರ: ಬಸ್‌‌ನಲ್ಲಿ ಕುಳಿತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬರಿಗೆ ಮಹಿಳೆ ಹಾಗೂ ಸಹ ಪ್ರಯಾಣಿಕರು ಬಸ್‌ನಲ್ಲೇ ಧರ್ಮದೇಟು ನೀಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೋಲಾರದಿಂದ ಬಂಗಾರಪೇಟೆ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕೆಎ 51 ಎಫ್ 445 ಸಂಖ್ಯೆಯ ಕೋಲಾರ–ಬಂಗಾರಪೇಟೆ ಪ್ಯಾಸೆಂಜರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ.

ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಮೊದಲು ಆಕೆಯ ಕೈ ಮುಟ್ಟಿದ್ದಾನೆ. ಬಳಿಕ ಆಕೆಯ ಕೈಗೆ ಮುತ್ತು ಕೊಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ತಕ್ಷಣವೇ ಆತನ ವಿರುದ್ಧ ತಿರುಗಿಬಿದ್ದು, ಬಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಿಳೆ ಆತನಿಗೆ ಬುದ್ಧಿ ಕಲಿಸುವ ವೇಳೆ ಬಸ್‌ನಲ್ಲಿದ್ದ ಕೆಲ ಸಹ ಪ್ರಯಾಣಿಕರೂ ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ. 

ಘಟನೆ ವೇಳೆ ತನ್ನನ್ನು ಕ್ಷಮಿಸುವಂತೆ ವ್ಯಕ್ತಿ ಮನವಿ ಮಾಡಿಕೊಂಡಿದ್ದಾನೆ. ತನಗೆ ಮಗು ಇದೆ, ದಯವಿಟ್ಟು ಬಿಟ್ಟುಬಿಡಿ ಎಂದು ಆತ ಮಹಿಳೆ ಹಾಗೂ ಪ್ರಯಾಣಿಕರಲ್ಲಿ ಕೇಳಿಕೊಂಡಿದ್ದಾನೆ. ಆದರೆ, ಮಹಿಳೆ ಹಾಗೂ ಸಹ ಪ್ರಯಾಣಿಕರು ಆತನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ವ್ಯಕ್ತಿ ಬಸ್‌ನಿಂದ ಕೆಳಗೆ ದುಮುಕಿ ಪರಾರಿಯಾಗಿದ್ದಾನೆ. ಆತ ಕೆಜಿಎಫ್ ಮೂಲದ ವ್ಯಕ್ತಿ ಎಂದು ಹೇಳಲಾಗಿದ್ದು, ಮತ್ತೊಂದೆಡೆ ಬಂಗಾರಪೇಟೆ ಮೂಲದ ಮಹಿಳೆಯೇ ಆತನಿಗೆ ಬಸ್‌ನಲ್ಲೇ ತಕ್ಕ ಪಾಠ ಕಲಿಸಿದ್ದಾರೆ.

ಘಟನೆಯ ಮತ್ತೊಂದು ವಿಡಿಯೋದಲ್ಲಿ, ಮಹಿಳೆಯ ಕಾಲು ಮುಟ್ಟಿ ವ್ಯಕ್ತಿ ಕ್ಷಮೆಯಾಚಿಸುತ್ತಿರುವ ದೃಶ್ಯ ಕಂಡುಬಂದಿದೆ. ಆದರೂ ಸಹ ಪ್ರಯಾಣಿಕರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಾಣುತ್ತದೆ.

ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. 

Exit mobile version