ಮಹಾರಾಷ್ಟ್ರದಲ್ಲಿ ನಕಲಿ ಹಾಲಿನ ಮಹಾದಂಧೆ ಬಯಲು!

Untitled design 2026 07 14T123038.260

ಮಹಾರಾಷ್ಟ್ರ, ಜುಲೈ(14): ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರವಾದ ಹಾಲಿನ ಕಲಬೆರಕೆ ಜಾಲವೊಂದನ್ನು ಪತ್ತೆಹಚ್ಚಲಾಗಿದೆ. ಸ್ಥಳೀಯ ಪೊಲೀಸರು ಹಾಗೂ ಆಹಾರ ಮತ್ತು ಔಷಧ ಆಡಳಿತ (FDA) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ವೇಳೆ ಈ ಮಹಾದಂಧೆ ಬಯಲಿಗೆ ಬಂದಿದೆ. ಕಳೆದ ಆರು ತಿಂಗಳಲ್ಲಿ ಸುಮಾರು 2.3 ಕೋಟಿ ಲೀಟರ್‌ಗೂ ಹೆಚ್ಚು ವಿಷಕಾರಿ ಕೃತಕ ಹಾಲನ್ನು ಮಾರುಕಟ್ಟೆಗೆ ಸರಬರಾಜು ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳ ಮಾರಾಟದ ದಾಖಲೆ ಪುಸ್ತಕಗಳನ್ನು ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಲಬೆರಕೆ ದಂಧೆಗಾಗಿ ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 2.30 ಲಕ್ಷ ಕಿಲೋಗ್ರಾಂ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಇದರ ಸಹಾಯದಿಂದ ಸರಿಸುಮಾರು 23.04 ಲಕ್ಷ ಲೀಟರ್ ಅತ್ಯಂತ ಅಪಾಯಕಾರಿ ಕೃತಕ ಹಾಲನ್ನು ತಯಾರಿಸಲಾಗಿದ್ದು, ಇದರ ಅಂದಾಜು ಮೌಲ್ಯ 9 ಕೋಟಿ 21 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ.

ಇನ್ನು ಈ ಕೃತಕ ಹಾಲು ಅಸಲಿ ಹಾಲಿನಂತೆಯೇ  ಕಾಣಲು ಮತ್ತು ಅದರಲ್ಲಿ ಹಾಲಿನ ಜಿಡ್ಡಿನಾಂಶವನ್ನು (ಫ್ಯಾಟ್) ಕೃತಕವಾಗಿ ಕಾಯ್ದುಕೊಳ್ಳಲು ಆರೋಪಿಗಳು ಬಟ್ಟೆ ತೊಳೆಯುವ ‘ನಿರ್ಮಾ’ ಡಿಟರ್ಜೆಂಟ್ ಪುಡಿ, ಪಾಮ್ ಆಯಿಲ್ ಮತ್ತು ಕಳಪೆ ಗುಣಮಟ್ಟದ ರಾಸಾಯನಿಕಗಳನ್ನು ಬಳಸುತ್ತಿದ್ದರು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ.

 ಈ ದಂಧೆಕೋರರು ಪ್ರತಿ 100 ಲೀಟರ್ ಶುದ್ಧ ಹಾಲಿಗೆ 10 ಲೀಟರ್ ಕೃತಕ ಹಾಲನ್ನು (ಶೇ. 10 ರಷ್ಟು ಅನುಪಾತದಲ್ಲಿ) ಮಿಶ್ರಣ ಮಾಡುತ್ತಿದ್ದರು. ಈ ಲೆಕ್ಕಾಚಾರದ ಆಧಾರದ ಮೇಲೆ, ಭೂಮ್ ಭಾಗದ ಹಾಲು ಸಂಗ್ರಹಣಾ ಕೇಂದ್ರಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಒಟ್ಟು 2.3 ಕೋಟಿ ಲೀಟರ್‌ಗೂ ಹೆಚ್ಚು ಕಲಬೆರಕೆ ಹಾಲನ್ನು ಪೂರೈಸಲಾಗಿದೆ. ಜಾನುವಾರುಗಳ ಮೇವು ಮಾರಾಟ ಮಾಡುವ ನೆಪದಲ್ಲಿ ಈ ಇಡೀ ದಂಧೆಯನ್ನು ರಹಸ್ಯವಾಗಿ ನಡೆಸಲಾಗುತ್ತಿತ್ತು. ಭೂಮ್ ತಾಲೂಕಿನಿಂದ ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ರಫ್ತಾಗುತ್ತಿದೆ.

ಡಿಟರ್ಜೆಂಟ್ ಹಾಗೂ ಕೆಮಿಕಲ್ ಮಿಶ್ರಿತ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಲಿವರ್, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಜೀವಕ್ಕೆ ಇದು ತೀವ್ರ ಅಪಾಯವನ್ನು ತಂದೊಡ್ಡಬಹುದು.  ಸದ್ಯ ತಲೆಮರೆಸಿಕೊಂಡಿರುವ 7 ಮಂದಿ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಜಾಲ ಬೀಸಿದ್ದಾರೆ.

Exit mobile version