ಇಂದೋರ್: ಪರದೇಶಿಪುರ ಪ್ರದೇಶದ ಸುಗನಾ ದೇವಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಮೂರು ಮಕ್ಕಳ ತಾಯಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಖಾಸಗಿ ಭಾಗದ ಬಳಿಯಿದ್ದ ಒಂದು ವಿಚಿತ್ರ ಹಚ್ಚೆ (Tattoo) ಆರೋಪಿಯನ್ನ ಪತ್ತೆ ಹಚ್ಚಿದೆ.
ಘಟನೆಯ ಹಿನ್ನೆಲೆ
ಪರದೇಶಿಪುರದ ಸುಗನಾ ದೇವಿ ಮೈದಾನದಲ್ಲಿ ಮಹಿಳೆಯೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಕೆಯ ಬಟ್ಟೆಗಳು ಹರಿದು ಹೋಗಿದ್ದವು ಮತ್ತು ದೇಹದ ಮೇಲೆ ಮಾರಣಾಂತಿಕ ಗಾಯಗಳಾಗಿದ್ದವು. ಪೊಲೀಸರು ತನಿಖೆ ನಡೆಸುವಾಗ ಮಹಿಳೆಯ ಖಾಸಗಿ ಭಾಗದ ಬಳಿ ಹಸಿರು ಬಣ್ಣದಲ್ಲಿ “ನಾನು ಕುಡಿದಿದ್ದೇನೆ, ದೂರವಿರಿ” ಎಂಬ ಆಘಾತಕಾರಿ ಸಂದೇಶವಿರುವ ಹಚ್ಚೆ ಪತ್ತೆಯಾಗಿದೆ. ಈ ಹಚ್ಚೆಯನ್ನು ಹಾಕಿದವರು ಯಾರು ಮತ್ತು ಅದರ ಉದ್ದೇಶವೇನು ಎಂಬುದು ಪೊಲೀಸರಿಗೆ ಮೊದಲು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಡಿಸಿಪಿ ಕುಮಾರ್ ಪ್ರತೀಕ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪ್ರಮುಖ ಸುಳಿವು ಸಿಕ್ಕಿತು. ಮೃತ ಮಹಿಳೆಯು ಶನಿವಾರ ರಾತ್ರಿ ಒಬ್ಬ ವ್ಯಕ್ತಿಯೊಂದಿಗೆ ಮೈದಾನದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಮುಖೇಶ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿ ಮುಖೇಶ್ ಪೊಲೀಸರ ಮುಂದೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆಕೆ ನನ್ನಿಂದ ಹಣ ಪಡೆಯುತ್ತಿದ್ದಳು, ಆದರೆ ನನ್ನನ್ನು ಬಿಟ್ಟು ಇತರ ಪುರುಷರೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆತ ಹೇಳಿದ್ದಾನೆ. ಇದೇ ಅಸೂಯೆ ಮತ್ತು ದ್ವೇಷದಿಂದ ಶನಿವಾರ ರಾತ್ರಿ ಆಕೆಯನ್ನು ಪುಸಲಾಯಿಸಿ ಮೈದಾನಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಕಲ್ಲಿನಿಂದ ಆಕೆಯ ಮುಖವನ್ನು ಜಜ್ಜಿ ಕೊಲೆ ಮಾಡಿದ್ದಾನೆ.
ಸುಗನಾ ದೇವಿ ಮೈದಾನವು ಬಹಳ ದಿನಗಳಿಂದ ಮಾದಕ ವ್ಯಸನಿಗಳ ತಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಮೃತ ಮಹಿಳೆಯು ಕೂಡ ಕೆಲವು ಮಾದಕ ದ್ರವ್ಯ ಬಳಕೆದಾರರೊಂದಿಗೆ ಸಂಪರ್ಕ ಹೊಂದಿದ್ದಳು ಮತ್ತು ಈ ಹಿಂದೆ ಕೆಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆಕೆಯ ಹೆಸರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ದೇಹದ ಮೇಲಿದ್ದ ಹಚ್ಚೆಯನ್ನು ಆರೋಪಿಯೇ ಹಾಕಿಸಿದ್ದನೇ ಅಥವಾ ಆಕೆ ಸ್ವತಃ ಹಾಕಿಸಿಕೊಂಡಿದ್ದಳೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





