ದೇಶದ ಕೋಟ್ಯಂತರ ಗೃಹ ಬಳಕೆದಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೆ ತರಲು ಮುಂದಾಗಿದೆ. ಅಕ್ಟೋಬರ್ 1, 2026ರಿಂದ ಸಬ್ಸಿಡಿ ದರದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದೆ. ಅರ್ಹ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ಸಹಿತ ಅಡುಗೆ ಅನಿಲದ ಪ್ರಯೋಜನ ತಲುಪುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.
ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಯಾವುದೇ ಪ್ರಕ್ರಿಯೆ ಕೈಗೊಳ್ಳಬೇಕಿಲ್ಲ. ಸೆಪ್ಟೆಂಬರ್ 19ರ ವೇಳೆಗೆ ಸಕ್ರಿಯ ಗೃಹ ಬಳಕೆಯ ಎಲ್‌ಪಿಜಿ ಗ್ರಾಹಕರಲ್ಲಿ 27.43 ಕೋಟಿ ಮಂದಿ, ಅಂದರೆ ಶೇ.89.9ರಷ್ಟು ಜನರು ದೃಢೀಕರಣ ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ದೃಢೀಕರಣ ಮಾಡದಿದ್ದರೆ ಸಬ್ಸಿಡಿ ಸಿಗುವುದಿಲ್ಲ
ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ಸೌಲಭ್ಯ ಲಭ್ಯವಿರುವುದಿಲ್ಲ. ಆದರೆ ಬಯೋಮೆಟ್ರಿಕ್ ಪೂರ್ಣಗೊಳಿಸದ ಕಾರಣಕ್ಕೆ ಎಲ್‌ಪಿಜಿ ಸಿಲಿಂಡರ್ ಪಡೆಯುವ ಅವಕಾಶವೇ ಸಂಪೂರ್ಣವಾಗಿ ನಿಲ್ಲುವುದಿಲ್ಲ; ಸಬ್ಸಿಡಿ ಅನ್ವಯಿಸದ ದರದಲ್ಲಿ ಸಿಲಿಂಡರ್ ಪಡೆಯಲು ಅವಕಾಶ ಇರುತ್ತದೆ.
ಗೃಹ ಬಳಕೆಯ ಸಬ್ಸಿಡಿ ಸಿಲಿಂಡರ್‌ಗಳನ್ನು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಗಳಿಗೆ ಬಳಸುವುದನ್ನು ತಡೆಯುವುದು, ನಕಲಿ ಹಾಗೂ ಅನರ್ಹ ಸಂಪರ್ಕಗಳನ್ನು ಗುರುತಿಸಿ ವ್ಯವಸ್ಥೆಯಿಂದ ತೆಗೆದುಹಾಕುವುದು ಮತ್ತು ಸಬ್ಸಿಡಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಈ ಕ್ರಮದ ಪ್ರಮುಖ ಉದ್ದೇಶಗಳಾಗಿವೆ. ಆಧಾರ್ ಆಧಾರಿತ ದೃಢೀಕರಣವು ಫಲಾನುಭವಿಗಳ ಗುರುತಿಸುವಿಕೆ ಹಾಗೂ ಡುಪ್ಲಿಕೇಟ್ ಸಂಪರ್ಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಬಯೋಮೆಟ್ರಿಕ್ ದೃಢೀಕರಣ ಹೇಗೆ ಮಾಡುವುದು?
ಗ್ರಾಹಕರು ಎಲ್‌ಪಿಜಿ ಸಿಲಿಂಡರ್ ವಿತರಣೆ ಸಂದರ್ಭದಲ್ಲಿ ವಿತರಣಾ ಸಿಬ್ಬಂದಿ ಮೂಲಕ ಬಯೋಮೆಟ್ರಿಕ್ ದೃಢೀಕರಣ ಮಾಡಿಸಿಕೊಳ್ಳಬಹುದು. ಜೊತೆಗೆ ತಮ್ಮ ಎಲ್‌ಪಿಜಿ ವಿತರಕರ ಕಚೇರಿಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶವೂ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೂ ದೃಢೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಲವು ಬಾರಿ ವಿಸ್ತರಿಸಿದ್ದ ಗಡುವು
ದೇಶಾದ್ಯಂತ ಎಲ್‌ಪಿಜಿ ಗ್ರಾಹಕರ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಭಿಯಾನ 2023ರ ಅಕ್ಟೋಬರ್‌ನಿಂದ ನಡೆಯುತ್ತಿದೆ. ಈ ಹಿಂದೆ ನೀಡಲಾಗಿದ್ದ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಗ್ರಾಹಕರು ಅಕ್ಟೋಬರ್ 1ಕ್ಕೂ ಮುನ್ನವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ.





