ನವದೆಹಲಿ: ದೇಶದಲ್ಲಿ ಎಲ್‌ಪಿಜಿ (LPG) ಕೊರತೆ ಉಂಟಾಗಬಹುದು ಎಂಬ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆ ಎದುರಿಸುತ್ತಿರುವ ಗ್ರಾಹಕರಿಗೆ ಪೈಪ್ ನೈಸರ್ಗಿಕ ಅನಿಲ (PNG) ಸಂಪರ್ಕ ಒದಗಿಸುವ ಯೋಜನೆಯನ್ನು ಸರ್ಕಾರ ಕೈಗೊಂಡಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರೆ ಸುಜಾತಾ ಶರ್ಮಾ ಅವರು ಈ ಕುರಿತು ವಿವರಗಳನ್ನು ಹಂಚಿಕೊಂಡರು. ಬಳಕೆದಾರರ ಬಳಕೆ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಎಲ್‌ಪಿಜಿ ರೀಫಿಲ್ಲಿಂಗ್ ಅಥವಾ ಮರುಆರ್ಡರ್ ಮಾಡಲು ಹೊಸ ಕಾಲಾವಧಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ಅವರು ಹೇಳಿದರು.
ಹೊಸ ನಿಯಮಗಳ ಪ್ರಕಾರ, ನಗರ ಪ್ರದೇಶಗಳಲ್ಲಿ ಗ್ರಾಹಕರು 25 ದಿನಗಳ ಬಳಿಕವೇ ಹೊಸ ಎಲ್‌ಪಿಜಿ ಸಿಲಿಂಡರ್‌ಗಾಗಿ ರೀಫಿಲ್ ಅಥವಾ ಮರುಆರ್ಡರ್ ಮಾಡಬಹುದಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಈ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿದೆ. ಗ್ಯಾಸ್ ಬಳಕೆಯನ್ನು ನಿಯಂತ್ರಿಸುವುದು ಹಾಗೂ ಅನಗತ್ಯ ಬುಕಿಂಗ್‌ಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.
ವಾಣಿಜ್ಯ ಗ್ರಾಹಕರಿಗೆ ಪೈಪ್ ನೈಸರ್ಗಿಕ ಅನಿಲ (PNG) ಸಂಪರ್ಕಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಿ ವಾಣಿಜ್ಯ ಬಳಕೆದಾರರು ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆ ಅನುಭವಿಸುತ್ತಾರೋ, ಅಲ್ಲಿ ಅವರನ್ನು ಪಿಎನ್‌ಜಿ ಸಂಪರ್ಕಕ್ಕೆ ವರ್ಗಾಯಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಈ ಕಾರ್ಯವನ್ನು ವೇಗಗೊಳಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಸಂಸ್ಥೆ ವಿವಿಧ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಆಪರೇಟರ್‌ಗಳೊಂದಿಗೆ ಸಭೆ ನಡೆಸಿದೆ. ಸಾಧ್ಯವಿರುವ ಎಲ್ಲ ನಗರ ಪ್ರದೇಶಗಳಲ್ಲಿ ಅರ್ಹ ವಾಣಿಜ್ಯ ಗ್ರಾಹಕರಿಗೆ PNG ಸಂಪರ್ಕ ನೀಡುವ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಜಾರಿಗೆ ತರಲು ಸೂಚನೆ ನೀಡಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಗ್ರಾಹಕರು PNG ಸಂಪರ್ಕಕ್ಕೆ ಬದಲಾಯಿಸಲು ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವಾಲಯ ಭರವಸೆ ನೀಡಿದೆ. ಇದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ ಎಂಬ ಯಾವುದೇ ಅಧಿಕೃತ ವರದಿ ಬಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ವರದಿಗಳ ಪರಿಣಾಮ ಜನರಲ್ಲಿ ಆತಂಕ ಹೆಚ್ಚಿದ ಪರಿಣಾಮ ಎಲ್‌ಪಿಜಿ ಸಿಲಿಂಡರ್‌ಗಳ ಅತಿಯಾದ ಬುಕಿಂಗ್ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಪೆಟ್ರೋಲಿಯಂ ಸಚಿವಾಲಯದ ಮಾಹಿತಿಯ ಪ್ರಕಾರ, ಕೇವಲ ಒಂದು ದಿನದ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಒಂದು ದಿನದ ಹಿಂದೆ 76 ಲಕ್ಷದಷ್ಟಿದ್ದ ಬುಕಿಂಗ್ ಸಂಖ್ಯೆ ಈಗ 88.8 ಲಕ್ಷಕ್ಕೆ ಏರಿಕೆಯಾಗಿದೆ. ಈ ರೀತಿಯ ಆತಂಕದಿಂದ ಮಾಡಿದ ಬುಕಿಂಗ್‌ಗಳು ಪೂರೈಕೆ ವ್ಯವಸ್ಥೆಗೆ ಒತ್ತಡ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಎಲ್‌ಪಿಜಿ ಪೂರೈಕೆಯನ್ನು ಬಲಪಡಿಸಲು ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯದ ವಕ್ತಾರ ರಾಜೇಶ್ ಸಿನ್ಹಾ ಅವರ ಪ್ರಕಾರ, ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ದೊಡ್ಡ ಹಡಗುಗಳು ಭಾರತತ್ತ ಬರುತ್ತಿವೆ.
ನಂದಾದೇವಿ ಮತ್ತು ಶಿವಲಿಕ್ ಎಂಬ ಹೆಸರಿನ ಈ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ. ಶಿವಲಿಕ್ ಹಡಗು ಮಾರ್ಚ್ 16ರಂದು ಹಾಗೂ ನಂದಾದೇವಿ ಹಡಗು ಮಾರ್ಚ್ 17ರಂದು ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಈ ಎರಡೂ ಹಡಗುಗಳು ಗುಜರಾತ್ ರಾಜ್ಯದ ಬಂದರುಗಳಿಗೆ ತಲುಪಲಿದ್ದು, ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಎಲ್‌ಪಿಜಿ ಪೂರೈಕೆ ಮಾಡಲಾಗುತ್ತದೆ.
