ಗಂಡನಿಗೆ ಬಾಲ್ಯದ ಗೆಳತಿಯನ್ನೇ ಎರಡನೇ ಮದುವೆ ಮಾಡಿಸಿದ ಹೆಂಡತಿ: ಕಾರಣ ಏನು ಗೊತ್ತಾ..!

Untitled design 2026 02 12T160805.866

ಲಾಹೋರ್: ಎರಡು ಜಡೆಗಳು ಒಂದೇ ಕಡೆ ಸೇರಿದರೆ ಅಲ್ಲಿ ಜಗಳ ಗ್ಯಾರಂಟಿ ಎಂಬ ಹಳೆಯ ಮಾತಿದೆ. ಅದರಲ್ಲೂ ಒಬ್ಬನೇ ಪತಿಗೆ ಇಬ್ಬರು ಪತ್ನಿಯರಿದ್ದರೆ ಕೇಳಬೇಕೆ ? ಅಸೂಯೆ, ಕಲಹಗಳಿರುತ್ತವೆ. ಆದರೆ ಪಾಕಿಸ್ತಾನದ ಲಾಹೋರ್‌ನಲ್ಲಿ ಮಹಿಳೆಯೊಬ್ಬಳು ತಾನೇ ಮುಂದೆ ನಿಂತು ತನ್ನ ಪತಿಗೆ ತನ್ನ ಪ್ರಾಣ ಗೆಳತಿಯನ್ನೇ ಮದುವೆ ಮಾಡಿಸಿದ್ದಾಳೆ.

ಏನಿದು ವಿಚಿತ್ರ ಪ್ರೇಮ ಪುರಾಣ ?

ಸಾಮಾನ್ಯವಾಗಿ ತನ್ನ ಪತಿ ಬೇರೊಬ್ಬಳ ಜೊತೆ ಮಾತನಾಡಿದರೆ ಸಾಕು, ಅನುಮಾನಗೊಂಡು ಪತಿ ಜೊತೆ ಜಗಳ ಮಾಡುವುದು ಸಹಜ ಆದರೆ ಲಾಹೋರ್‌ನ ಈ ಮಹಿಳೆಯ ನಿರ್ಧಾರ ಆಧುನಿಕ ಸಂಬಂಧಗಳ ವ್ಯಾಖ್ಯಾನವನ್ನೇ ಬದಲಿಸಿದೆ. ಈಕೆ ತನ್ನ ಪತಿಯನ್ನು ಮತ್ತು ತನ್ನ ಬಾಲ್ಯದ ಗೆಳತಿಯನ್ನು ಒಂದಾಗಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಸ್ನೇಹ ಮತ್ತು ಪ್ರೀತಿಯ ನಡುವಿನ ಗೆರೆಯನ್ನು ಅಳಿಸಿ, ಇಬ್ಬರನ್ನೂ ಮದುವೆ ಮಾಡಿಸಿದ್ದಾಳೆ.

ಈ ನಿರ್ಧಾರದ ಹಿಂದೆ ಯಾವುದೇ ಒತ್ತಡ ಇರಲಿಲ್ಲವಂತೆ. ಬದಲಿಗೆ, ಪತ್ನಿಯು ತನ್ನ ಗಂಡನ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ ಮತ್ತು ಗೆಳತಿಯ ಮೇಲಿದ್ದ ಗಾಢವಾದ ಸ್ನೇಹವೇ ಈ ವಿವಾಹಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪತಿ ಮತ್ತು ಗೆಳತಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರು ಜೊತೆಗೆ ಗೆಳತಿಯ ಜೀವನಕ್ಕೆ ಒಂದು ನೆಲೆ ಬೇಕಿತ್ತು ಎಂಬ ಕಾರಣಕ್ಕೆ ಆಕೆ ಸ್ವಯಂಪ್ರೇರಿತವಾಗಿ ಈ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನವರಿಬ್ಬರ ಸಂತೋಷವೇ ತನ್ನ ಸುಖ ಎಂದು ಭಾವಿಸಿದ ಈಕೆಯ ನಿಸ್ವಾರ್ಥ ಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಈ ಅಪರೂಪದ ಕಥೆಯ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಕಾಮೆಂಟ್‌ಗಳ ಸುರಿಮಳೆಯೇ ಹರಿಯುತ್ತಿದೆ. ಅನೇಕರು ಈ ಪತಿಯನ್ನು ಜಗತ್ತಿನ ಅತ್ಯಂತ ಅದೃಷ್ಟವಂತ ವ್ಯಕ್ತಿ ಎಂದು ಕರೆದಿದ್ದಾರೆ. ಇಂತಹ ವಿಶಾಲ ಮನಸ್ಸಿನ ಪತ್ನಿ ಸಿಗಲು ಪುಣ್ಯ ಮಾಡಿರಬೇಕು ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಇದು ಸಂಸಾರದಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ತರಬಹುದು ಎಂದು ಎಚ್ಚರಿಸಿದ್ದಾರೆ.

ಸಾಂಪ್ರದಾಯಿಕ ವೈವಾಹಿಕ ಚೌಕಟ್ಟುಗಳನ್ನು ಮೀರಿ ಈಕೆ ತೆಗೆದುಕೊಂಡಿರುವ ನಿರ್ಧಾರವು ಸಂಬಂಧಗಳಲ್ಲಿನ ತಿಳುವಳಿಕೆ ಮತ್ತು ಪರಸ್ಪರ ಸಹಕಾರದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನಿಸ್ವಾರ್ಥ ಪ್ರೇಮಕ್ಕೆ ಈಕೆ ಉದಾಹರಣೆಯಾಗಿ ಕಂಡರೂ, ಸಮಾಜದಲ್ಲಿ ಇದು ಎಷ್ಟರ ಮಟ್ಟಿಗೆ ಸರಿ ಎಂಬ ವಾದ-ವಿವಾದಗಳೂ ನಡೆಯುತ್ತಿವೆ.

Exit mobile version