ಹೈದರಾಬಾದ್: ದಾಂಡಿಯಾ (Dandiya) ಸಂಭ್ರಮಾಚರಣೆಯ ವೇಳೆ ಲೈಟಿಂಗ್ ಕಂಬ ಬಿದ್ದು (Lighting Structure Collapse) ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ಹೊರವಲಯದ ನಾದರ್ಗುಲ್ನಲ್ಲಿರುವ ಎಂವಿಎಸ್ಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಘಟನೆಯಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ದಾಂಡಿಯಾ ಸಂಭ್ರಮದ ನಡುವೆ ಸಂಭವಿಸಿದ ದುರಂತ
ನವರಾತ್ರಿ ಹಿನ್ನೆಲೆಯಲ್ಲಿ ಎಂವಿಎಸ್ಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಮೈದಾನದಲ್ಲಿ ನೂರಾರು ವಿದ್ಯಾರ್ಥಿಗಳು ಸಂಭ್ರಮದಿಂದ ನೃತ್ಯ ಮಾಡುತ್ತಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕಾಗಿ ಅಳವಡಿಸಲಾಗಿದ್ದ ಭಾರೀ ತೂಕದ ಕಬ್ಬಿಣದ ಲೈಟಿಂಗ್ ಚೌಕಟ್ಟು ಏಕಾಏಕಿ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದೆ.
ಈ ಘಟನೆಯಿಂದ ಸ್ಥಳದಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಲೈಟಿಂಗ್ ಉಪಕರಣಗಳ ಅಡಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಲು ಸಹಪಾಠಿಗಳು ಹಾಗೂ ಸ್ಥಳದಲ್ಲಿದ್ದವರು ಧಾವಿಸಿದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿನಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
हैदराबाद: MVSR इंजीनियरिंग कॉलेज में डांडिया कार्यक्रम के दौरान लाइटिंग पोल गिरने से 2 छात्रों की मौत, कई घायल और 5 की हालत गंभीर।
आखिर इस हादसे का जिम्मेदार कौन है? आयोजकों की जवाबदेही तय हो और मामले की निष्पक्ष जांच कर दोषियों पर सख्त कार्रवाई होनी चाहिए।
#DandiyaEvent #Hyderabad
@hydcitypolice @TelanganaCOPs— Vivek Singh (@whovivek69) October 17, 2026
ಈ ದುರಂತದಲ್ಲಿ ಮೃತಪಟ್ಟವರಲ್ಲಿ ಸೋನಾ ನಾರಾಯಣ ದಾಸ್ ಎಂಬ ಮೊದಲ ವರ್ಷದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯೂ ಸೇರಿದ್ದಾರೆ. ನವರಾತ್ರಿ ಸಂಭ್ರಮದಲ್ಲಿ ಭಾಗವಹಿಸಲು ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಕಾಲೇಜಿನಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಭ್ರಮದಿಂದ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಲೈಟಿಂಗ್ ಚೌಕಟ್ಟು ಕುಸಿದು ಬಿದ್ದು ಈ ಘಟನೆ ಸಂಭವಿಸಿದೆ.
ಸಿಎಂ ರೇವಂತ್ ರೆಡ್ಡಿ ತೀವ್ರ ಸಂತಾಪ
ಹೈದರಾಬಾದ್ ಕಾಲೇಜಿನಲ್ಲಿ ಸಂಭವಿಸಿದ ದುರಂತಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ವಿದ್ಯಾರ್ಥಿನಿಯರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿರುವ ಅವರು, ಗಾಯಗೊಂಡ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪಘಾತಕ್ಕೆ ಕಾರಣರಾದವರನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
