ಕೋಲ್ಕತಾ, ಡಿ.07: ಪಶ್ಚಿಮ ಬಂಗಾಳವು ಇತ್ತೀಚೆಗೆ ವಿವಾದಾತ್ಮಕ ಘಟನೆಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ವಿಶೇಷವಾಗಿ, ಬಾಬ್ರಿ ಮಸೀದಿ ವಿಚಾರದಲ್ಲಿ ರಾಜ್ಯಾದ್ಯಂತ ರಾಜಕೀಯ ಬಿರುಗಾಳಿ ಎದ್ದಿದೆ. ಕಾಂಗ್ರೆಸ್‌ನಿಂದ ಅಮಾನತುಗೊಂಡ ಶಾಸಕರೊಬ್ಬರು ಮುರ್ಶಿದಾಬಾದ್‌ನಲ್ಲಿ ಬಾಬ್ರಿ ಮಸೀದಿಯ ಮಾದರಿಯಲ್ಲಿ ಅಡಿಗಲ್ಲು ಹಾಕಿ ತೀವ್ರ ವಿವಾದ ಸೃಷ್ಟಿಸಿದರು. ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸಗೊಂಡ ದಿನವನ್ನೇ ಅಡಿಗಲ್ಲು ಹಾಕಲು ಆಯ್ದುಕೊಂಡಿದ್ದು, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು.
ಈ ವಿವಾದಾತ್ಮಕ ಘಟನೆಯ ಮರುದಿನವೇ, ಕೋಲ್ಕತಾದ ಪ್ರತಿಷ್ಠಿತ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಅಭೂತಪೂರ್ವ ಘಟನೆಯೊಂದು ನಡೆಯಿತು. ಇದು ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಜ್ಯದ ಇತಿಹಾಸದಲ್ಲೇ ದಾಖಲೆ ಎನ್ನುವಂತೆ, ಐದು ಲಕ್ಷಕ್ಕೂ ಹೆಚ್ಚು ಹಿಂದೂಗಳು ಒಂದೆಡೆ ಸೇರಿ ‘ಭಗವದ್ಗೀತಾ ಪಠಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಐತಿಹಾಸಿಕ ‘ಹಿಂದೂ ಸಂಗಮ’ವನ್ನು ಬಿಜೆಪಿ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಕೊಂಡಾಡಿದ್ದು, ‘ಬಂಗಾಳದ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ’ ಎಂದು ಘೋಷಿಸಿವೆ.
ಈ ಬೃಹತ್ ಭಗವದ್ಗೀತೆ ಪಠಣ ಕಾರ್ಯಕ್ರಮವನ್ನು ‘ಸನಾತನ ಸಂಸ್ಕೃತಿ ಸಾಂಸದ್’ ಎಂಬ ಸಂಘಟನೆಯು ಯಶಸ್ವಿಯಾಗಿ ಆಯೋಜಿಸಿತ್ತು. ಪಶ್ಚಿಮ ಬಂಗಾಳದಲ್ಲಿರುವ ಹಿಂದೂ ಸಮುದಾಯಗಳಲ್ಲಿ ಒಗ್ಗಟ್ಟು ಮತ್ತು ಧಾರ್ಮಿಕ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಹಿಂದೂ ಧರ್ಮದ ಅತ್ಯಂತ ಪವಿತ್ರ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆಯು ಸಮಸ್ತ ಹಿಂದೂಗಳನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಅದರ ಸಾಮೂಹಿಕ ಪಠಣವು ದೇಶಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಧು-ಸಂತರು ವ್ಯಕ್ತಪಡಿಸಿದರು.
𝐎𝐯𝐞𝐫 𝟔.𝟓 𝐥𝐚𝐤𝐡 𝐇𝐢𝐧𝐝𝐮 𝐡𝐞𝐚𝐫𝐭𝐬 𝐛𝐞𝐚𝐭𝐢𝐧𝐠 𝐚𝐬 𝐨𝐧𝐞!
Kolkata’s iconic Brigade Parade Ground witnessed a historic gathering as devotees came together to recite the Bhagavad Gita in unison.
A sea of saffron and white filled the ground as thousands chanted… pic.twitter.com/MGiQcTmHXB
— BJP (@BJP4India) December 7, 2025
ಐದು ಲಕ್ಷಕ್ಕೂ ಅಧಿಕ ಜನರು ಏಕಕಾಲದಲ್ಲಿ ಭಗವದ್ಗೀತೆ ಪಠಿಸುತ್ತಿದ್ದ ದೃಶ್ಯ ಮನಸೆಳೆಯುವಂತಿತ್ತು. ಮೈದಾನದುದ್ದಕ್ಕೂ ಮೊಳಗಿದ ವಾದ್ಯಘೋಷಗಳು, ಮಂತ್ರಗಳ ಪಠಣ ಮತ್ತು ಭಕ್ತಿಪೂರ್ವಕ ವಾತಾವರಣವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.
ಈ ಯಶಸ್ವಿ ಸಮಾವೇಶದ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ಮಾತನಾಡುತ್ತಾ, ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಕೋಲ್ಕತಾದಲ್ಲಿ ಅದ್ಭುತ ಕಾರ್ಯಕ್ರಮ ನಡೆದಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಪಾಲ್ಗೊಂಡಿರುವುದು, ಪಶ್ಚಿಮ ಬಂಗಾಳದ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಹಿಂದೂಗಳು ಒಗ್ಗಾಟ್ಟಾಗುತ್ತಿದ್ದಾರೆ. ಈ ಒಗ್ಗಟ್ಟಿನ ಶಕ್ತಿ ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.
ಕಳೆದ ವರ್ಷ ಸಿಲಿಗುರಿಯಲ್ಲಿ ಆಯೋಜಿಸಲಾಗಿದ್ದ ಇದೇ ರೀತಿಯ ಭಗವದ್ಗೀತೆ ಪಠಣ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಂಡಿದ್ದರು. ಆದರೆ, ಈ ವರ್ಷ ಕೋಲ್ಕತಾದಲ್ಲಿ ಪಾಲ್ಗೊಂಡವರ ಸಂಖ್ಯೆ ಬರೋಬ್ಬರಿ ಐದು ಲಕ್ಷಕ್ಕೆ ಏರಿಕೆಯಾಗಿರುವುದು, ರಾಜ್ಯದಲ್ಲಿ ಹಿಂದೂ ಜಾಗೃತಿಯ ಅಲೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ದಿಲೀಪ್ ಘೋಷ್ ವಿಶ್ಲೇಷಿಸಿದರು. ಈ ಮಹಾಸಂಗಮವನ್ನು ಅವರು ‘ಬಂಗಾಳದಲ್ಲಿ ಹಿಂದೂಗಳ ಬಿರುಗಾಳಿ’ ಎಂದು ಬಣ್ಣಿಸಿದರು.
ಕೋಲ್ಕತಾ ಮತ್ತು ಸಿಲಿಗುರಿಯಲ್ಲಿ ನಡೆದ ಭಗವದ್ಗೀತಾ ಪಠಣ ಕಾರ್ಯಕ್ರಮಗಳ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ‘ಸನಾತನ ಸಂಸ್ಕೃತಿ ಸಾಂಸದ್’ ಸಂಘಟನೆಯು ಇದೇ ರೀತಿಯ ಕಾರ್ಯಕ್ರಮಗಳನ್ನು ದೇಶದ ಇತರ ಪ್ರಮುಖ ನಗರಗಳಲ್ಲಿ ಆಯೋಜಿಸಲು ಯೋಜನೆ ರೂಪಿಸುತ್ತಿದೆ. ವಿವಿಧ ಸಾಧು-ಸಂತರು ಮತ್ತು ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಈ ಪಠಣ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಸಂಘಟನೆ ಮುಂದಾಗಿದೆ. ಈ ಮೂಲಕ ದೇಶಾದ್ಯಂತ ಸನಾತನ ಧರ್ಮದ ಸಂದೇಶವನ್ನು ಮತ್ತು ಹಿಂದೂಗಳಲ್ಲಿ ಒಗ್ಗಟ್ಟಿನ ಭಾವನೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.





