ಕರ್ನಾಟಕದಲ್ಲಿ ಮತಗಳ್ಳತನ, ಕಾಂಗ್ರೆಸ್ ಮತದಾರರೇ ಟಾರ್ಗೆಟ್: ಹೊಸ ಬಾಂಬ್ ಸಿಡಿಸಿದ ರಾಹುಲ್ ಗಾಂಧಿ

Untitled design 2025 09 18t124341.147

ನವದೆಹಲಿ: ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನದ ದೊಡ್ಡ ಹಗರಣ ನಡೆದಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮತದಾರರನ್ನು ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಿ ಮತಪಟ್ಟಿಯಿಂದ ಅವರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ಹೇಳಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಸುಮಾರು 6018 ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಅವರು ವಿವರಿಸಿದರು. ಇದು ಚುನಾವಣಾ ಪ್ರಕ್ರಿಯೆಯ ಮೇಲಿನ ದೊಡ್ಡ ದಾಳಿ ಎಂದು ಆರೋಪಿಸಿದ ರಾಹುಲ್, ಈ ಬಗ್ಗೆ ಚುನಾವಣಾ ಆಯೋಗಕ್ಕೆ 16 ಬಾರಿ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಟೀಕಿಸಿದರು.

ರಾಹುಲ್ ಗಾಂಧಿ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ ಈ ಹಗರಣದ ವಿವರಗಳನ್ನು ಒಂದೊಂದಾಗಿ ಬಯಲು ಮಾಡಿದರು. ಕಳೆದ ಬಾರಿಯ ಚುನಾವಣೆಯಲ್ಲಿ ನಕಲಿ ಮತದಾರರ ಪಟ್ಟಿಯ ಬಗ್ಗೆ ತಾವು ಮಾತನಾಡಿದ್ದೆವು ಎಂದು ನೆನಪಿಸಿದ ಅವರು, ಈ ಬಾರಿ ಮತಗಳ್ಳತನ ಹೇಗೆ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು. ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರನ್ನು ಗುರಿಯಾಗಿಸಿ ಅವರ ಹೆಸರುಗಳನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಇದರಿಂದಾಗಿ ಬೇರೆ ರಾಜ್ಯಗಳಿಂದ ಬಂದ ವ್ಯಕ್ತಿಗಳು ನಕಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದರು. ಉದಾಹರಣೆಗೆ, ಬೂತ್ ನಂಬರ್ 37ರಲ್ಲಿ ಗೋದಾಬಾಯ್ ಎಂಬ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಆ ಹೆಸರಿನಲ್ಲಿ ಸುಮಾರು 12 ನಕಲಿ ಮತದಾನಗಳು ನಡೆದಿವೆ. ಈ ನಕಲಿ ಮತದಾರರು ಬೇರೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ ಎಂದು ಅವರು ವಿವರಿಸಿದರು.

ಇದೇ ರೀತಿ ಸೂರ್ಯಕಾಂತ್ ಎಂಬ ಮತದಾರರ ಹೆಸರು ಸಹ ಡಿಲೀಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರಿನ ಮೇಲೆ ಸುಮಾರು 12 ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಮತದಾರರಿಗೆ ಯಾವುದೇ ಮಾಹಿತಿ ನೀಡದೇ ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ ಎಂದು ರಾಹುಲ್ ಹೇಳಿದರು. ಅಲ್ಲದೆ, ಬಬಿತಾ ಸೇರಿದಂತೆ ಹಲವಾರು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ಹಲವೆಡೆ ನಕಲಿ ಮತದಾನ ನಡೆದಿದೆ ಎಂದು ಅವರು ಆರೋಪಿಸಿದರು. ಈ ಹಗರಣವು ಕೇವಲ ಆಳಂದಕ್ಕೆ ಸೀಮಿತವಲ್ಲ, ಮಹಾರಾಷ್ಟ್ರದ ರಾಜೇರಾ ಕ್ಷೇತ್ರದಲ್ಲೂ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ರಾಹುಲ್ ಬಯಲು ಮಾಡಿದರು. ಮಹಾರಾಷ್ಟ್ರದಲ್ಲಿ ಸುಮಾರು 6080 ನಕಲಿ ಮತದಾರರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಹೇಳಿದರು.

ಈ ಆರೋಪಗಳು ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರಿಗೆ ಈ ಬಗ್ಗೆ ಗೊತ್ತಿಲ್ಲವೇ ಎಂದು ರಾಹುಲ್ ಪ್ರಶ್ನಿಸಿದರು. ನಾವು 16 ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ. ಬದಲಿಗೆ ನಕಲಿ ಮತದಾರರನ್ನು ಮತ್ತು ಮತಗಳ್ಳರನ್ನು ರಕ್ಷಿಸುವ ಕೆಲಸವನ್ನು ಆಯೋಗ ಮಾಡಿದೆ ಎಂದು ಅವರು ಆರೋಪಿಸಿದರು. ಈ ಹಗರಣವು ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Exit mobile version