ಭೋಪಾಲ್: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ತನ್ನ ಆಕರ್ಷಕ ಕಣ್ಣುಗಳು ಮತ್ತು ವೈರಲ್ ವಿಡಿಯೋ ಮೂಲಕ ಕೋಟ್ಯಂತರ ಜನರ ಮನಗೆದ್ದಿದ್ದ ಯುವತಿ ಮೊನಾಲಿಸಾ ಭೋಂಸ್ಲೆ ಮದುವೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಮೊನಾಲಿಸಾ ಕೇರಳದಲ್ಲಿ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದು, ಇದನ್ನು ಲವ್ ಜಿಹಾದ್ ಪ್ರಕರಣ ಎಂದು ಆಕೆಯ ತಂದೆ ಜಯಸಿಂಗ್ ಭೋಂಸ್ಲೆ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ ಮೂಲದವರಾದ ಜಯಸಿಂಗ್ ಭೋಂಸ್ಲೆ ಅವರು ತಮ್ಮ ಮಗಳನ್ನು ಮೋಸದಿಂದ ಮದುವೆಯಾಗಲಾಗಿದೆ ಎಂದು ಆರೋಪ ಮಾಡಿದ್ದಾರೆ. ನನ್ನ ಮಗಳು ದೇಶಾದ್ಯಂತ ಹೆಸರು ಗಳಿಸಿದ್ದಾಳೆ. ಆಕೆಯನ್ನು ಸುಳ್ಳು ಹೇಳಿ ಕೇರಳಕ್ಕೆ ಕರೆದೊಯ್ದು ಮದುವೆ ಮಾಡಲಾಗಿದೆ. ಇದು ಲವ್ ಜಿಹಾದ್ ಸಂಚು ಇರಬಹುದು ಎಂಬ ಅನುಮಾನವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳನ್ನು ಸುರಕ್ಷಿತವಾಗಿ ಮರಳಿ ಮಧ್ಯಪ್ರದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಿಎಂ ಮೋಹನ್ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.
ಸಿನಿಮಾ ಅವಕಾಶದ ನೆಪದಲ್ಲಿ ಮದುವೆ ?
ಮೂಲಗಳ ಪ್ರಕಾರ, ಮೊನಾಲಿಸಾ ಚಿತ್ರರಂಗದಲ್ಲಿ ಅವಕಾಶ ಪಡೆಯಲು ನಟನೆ ಮತ್ತು ನೃತ್ಯದ ತರಬೇತಿ ಪಡೆಯುತ್ತಿದ್ದಳು. ಆಕೆ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾಳೆ ಎಂದೂ ಹೇಳಲಾಗಿತ್ತು. ಆದರೆ, ತರಬೇತಿಯ ನೆಪದಲ್ಲಿ ಕೇರಳಕ್ಕೆ ತೆರಳಿದ ಮೊನಾಲಿಸಾ ಅಲ್ಲಿ ಫರ್ಮಾನ್ ಖಾನ್ ಜೊತೆ ವಿವಾಹವಾಗಿದ್ದಾಳೆ. ನನ್ನ ಮಗಳು ನಟಿಯಾಗುತ್ತಾಳೆ ಎಂದುಕೊಂಡಿದ್ದೆವು, ಆದರೆ ಈ ರೀತಿ ಮದುವೆಯಾಗುತ್ತಾಳೆ ಎಂದು ಊಹಿಸಿರಲಿಲ್ಲ ಎಂದು ತಂದೆ ಜಯಸಿಂಗ್ ಅಳಲು ತೋಡಿಕೊಂಡಿದ್ದಾರೆ.
‘ಇದು ಕೇರಳ ಸ್ಟೋರಿ-3’ ಎಂದ ಸನ್ಯಾಸಿ
ಮಹಾಕುಂಭ ಮೇಳದ ಅವಧಿಯಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಮಾಜಿ ನಟಿ ಹರ್ಷ ರಿಚಾರಿಯಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ನಿಜವಾದ ‘ಕೇರಳ ಸ್ಟೋರಿ-3’. ಸಾಮಾನ್ಯ ಕುಟುಂಬದ ಹುಡುಗಿ ತನ್ನ ಸೌಂದರ್ಯದಿಂದ ಪ್ರಸಿದ್ಧಿ ಪಡೆದ ನಂತರ ಈ ರೀತಿ ಮದುವೆಯಾಗಿರುವುದು ಆತಂಕಕಾರಿ. ಆಕೆಯನ್ನು ಭಾರಿ ಭದ್ರತೆಯ ನಡುವೆ ಮದುವೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಆಕೆಯ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಈಗಲೇ ಹೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾಕುಂಭದಲ್ಲಿ ಮಣಿಮಾಲೆಗಳನ್ನು ಮಾರುತ್ತಿದ್ದ ಹುಡುಗಿ ಬೆಳ್ಳಿತೆರೆಯ ನಾಯಕಿಯಾಗುವ ಕನಸು ಕಂಡಿದ್ದಳು. ಆದರೆ ಈಗ ಕೇರಳದಲ್ಲಿ ನಡೆದ ಈ ವಿವಾಹವು ಮಧ್ಯಪ್ರದೇಶ ಮತ್ತು ಕೇರಳದ ನಡುವೆ ರಾಜಕೀಯ ಹಾಗೂ ಸಾಮಾಜಿಕ ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಪ್ರಕರಣದ ಬಗ್ಗೆ ಮಧ್ಯಪ್ರದೇಶ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
