ದೆಹಲಿ: ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ಮೂಗು ತೂರಿಸಿದ ಅಮೆರಿಕದ ಧೋರಣೆಗೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕವು ಭಾರತಕ್ಕೆ ಅನುಮತಿ ನೀಡಿದೆ ಎಂಬ ಉನ್ನತ ಅಧಿಕಾರಿಯೊಬ್ಬರ ಹೇಳಿಕೆಯನ್ನು ಕಮಲ್ ಹಾಸನ್ ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಫಾಕ್ಸ್ ಬ್ಯುಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಖಜಾನೆ ಕಾರ್ಯದರ್ಶಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಆಪ್ತ ಸಹಾಯಕ ಸ್ಕಾಟ್ ಬೆಸೆಂಟ್ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿರುವುದರಿಂದ ಇಂಧನದ ಅಭಾವ ಉಂಟಾಗಿದೆ. ಹಾಗಾಗಿ, ರಷ್ಯಾದ ತೈಲವನ್ನು ಸ್ವೀಕರಿಸಲು ನಾವು ಭಾರತಕ್ಕೆ ಅನುಮತಿ ನೀಡಿದ್ದೇವೆ ಎಂದು ಅವರು ಹೇಳಿದ್ದರು. ಈ ಅನುಮತಿ (Permission) ಎಂಬ ಪದವು ಭಾರತದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಕ್ಕಳ್ ನೀಧಿ ಮೈಯಂ (MNM) ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸಂಸದ ಕಮಲ್ ಹಾಸನ್ ಅವರು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ಅಮೆರಿಕ ಅಧ್ಯಕ್ಷರನ್ನು ಉದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ, ಆತ್ಮೀಯ ಶ್ರೀ ಅಧ್ಯಕ್ಷರೇ, ನಾವು ಭಾರತದ ಜನರು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರಕ್ಕೆ ಸೇರಿದವರು. ನಾವು ಇನ್ನು ಮುಂದೆ ದೂರದ ವಿದೇಶಿ ಅಧಿಕಾರಿಗಳ ಆದೇಶಗಳನ್ನು ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಸ್ವಂತ ವ್ಯವಹಾರವನ್ನು ನೀವು ನೋಡಿಕೊಳ್ಳಿ ಎಂದು ಕಮಲ್ ಹಾಸನ್ ಗುಡುಗಿದ್ದಾರೆ.
ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆಯೇ ಹೊರತು ಯಾವುದೇ ದೇಶದ ಅಪ್ಪಣೆಗೆ ಕಾಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟನೆ
ಅಮೆರಿಕದ ಅಧಿಕಾರಿಯ ಹೇಳಿಕೆಯನ್ನು ಕೇಂದ್ರ ಸರ್ಕಾರವೂ ತಳ್ಳಿಹಾಕಿದೆ. ಭಾರತವು ತನ್ನ ಕಚ್ಚಾ ತೈಲ ಮೂಲಗಳನ್ನು 27 ರಿಂದ 40 ದೇಶಗಳಿಗೆ ವೈವಿಧ್ಯಗೊಳಿಸಿದೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಮಗೆ ಎಲ್ಲಿ ಕೈಗೆಟುಕುವ ದರದಲ್ಲಿ ತೈಲ ಸಿಗುತ್ತದೆಯೋ ಅಲ್ಲಿಂದ ನಾವು ಖರೀದಿಸುತ್ತೇವೆ. ಇದಕ್ಕಾಗಿ ನಾವು ಬೇರೆ ದೇಶದ ಅನುಮತಿಯನ್ನು ಅವಲಂಬಿಸಿಲ್ಲ ಎಂದು ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವಿಷಯವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಭಾರತದ ವಿದೇಶಾಂಗ ನೀತಿಯು ಜನರ ಸಾಮೂಹಿಕ ಇಚ್ಛೆಯಿಂದ ಇರಬೇಕಿತ್ತು. ಆದರೆ ಇಂದು ಅಮೆರಿಕದ ಅಧಿಕಾರಿಗಳು ನಮಗೆ ಅನುಮತಿ ನೀಡುವ ಸ್ಥಿತಿ ಬಂದಿರುವುದು ಶೋಚನೀಯ ಎಂದು ಟೀಕಿಸಿದ್ದಾರೆ.





