ಚಂಡೀಗಢ: ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದಡಿ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿತಳಾಗಿದ್ದಾಳೆ. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಂದ ಬೇಹುಗಾರಿಕೆ ತರಬೇತಿ ಪಡೆದಿದ್ದ ಜ್ಯೋತಿ, ಭಾರತದ ಸೂಕ್ಷ್ಮ ಮಾಹಿತಿಗಳನ್ನು ಕಲೆಹಾಕಲು ಆಕೆಯನ್ನು ಬಳಸಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.
ಜ್ಯೋತಿ ಮಲ್ಹೋತ್ರಾ, ಹೊಸದಿಲ್ಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಭಾರತ-ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಆಕೆಯ ಚಲನವಲನಗಳು ಶಂಕಾಸ್ಪದವಾಗಿದ್ದವು. ತನಿಖೆಯಲ್ಲಿ ಆಕೆಯ ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ.

Hisar, Haryana: On the arrest of YouTuber Jyoti Malhotra for allegedly spying for Pakistan, SP Hisar Shashank Kumar Sawan says, “During the conflict, she was in contact with PIOs… Although she remained in touch with PIOs, she did not have any direct access to critical military… pic.twitter.com/N8Z5Fez4mh
— IANS (@ians_india) May 18, 2025
ಪಾಕಿಸ್ತಾನಕ್ಕೆ ಹಲವು ಬಾರಿ ಮತ್ತು ಚೀನಾಕ್ಕೆ ಒಮ್ಮೆ ಭೇಟಿ ನೀಡಿದ್ದ ಜ್ಯೋತಿ, ತನ್ನ ಪ್ರವಾಸದ ಖರ್ಚನ್ನು ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳಿಂದಲೇ ಪಡೆದಿದ್ದಳು. ಆಕೆಯನ್ನು ಭಾರೀ ಹಣದ ಆಸೆಯಿಂದ ಪ್ರೇರೇಪಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಪಾಕಿಸ್ತಾನದಲ್ಲಿ ಜ್ಯೋತಿ, ಡ್ಯಾನಿಶ್ ಎಂಬಾತನ ಮೂಲಕ ಹಲವು ಉನ್ನತ ವ್ಯಕ್ತಿಗಳನ್ನು ಭೇಟಿಯಾಗಿದ್ದಾಳೆ.
ಹಿಸ್ಸಾರ್‌ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್, “ಜ್ಯೋತಿಯ ಬಳಿ ಭಾರತದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ನೇರ ಮಾಹಿತಿಗಳಿರಲಿಲ್ಲ. ಆದರೆ, ಆಕೆ ಪಾಕ್ ಗುಪ್ತಚರರೊಂದಿಗೆ ಸಂಪರ್ಕದಲ್ಲಿದ್ದದ್ದು ಖಚಿತವಾಗಿದೆ,” ಎಂದು ತಿಳಿಸಿದ್ದಾರೆ.
‘ಟ್ರಾವೆಲ್ ವಿತ್ JO’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ, 3.77 ಲಕ್ಷ ಚಂದಾದಾರರನ್ನು ಹೊಂದಿದ್ದಳು. ಆಕೆಯ ಇನ್ಸ್ಟಾಗ್ರಾಮ್ ಖಾತೆಯೂ 1.33 ಲಕ್ಷ ಫಾಲೋವರ್ಸ್ ಹೊಂದಿತ್ತು. ಆದರೆ, ಆಕೆಯ ಸಾಮಾಜಿಕ ಜಾಲತಾಣದ ಜನಪ್ರಿಯತೆಯನ್ನು ದುರ್ಬಳಕೆ offsite link ಪಾಕ್ ಗುಪ್ತಚರರು ಬಳಸಿಕೊಂಡಿದ್ದಾರೆ.
ಸದ್ಯ ಜ್ಯೋತಿಯನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆಕೆಯ ಹಣಕಾಸು ವ್ಯವಹಾರಗಳು ಮತ್ತು ಪ್ರಯಾಣದ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆಯಲ್ಲಿ ತೊಡಗಿವೆ. ಜ್ಯೋತಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ದೇಶದಲ್ಲಿ ಸಾಮಾಜಿಕ ಜಾಲತಾಣ ತಾರೆಯರ ಸಂಪರ್ಕಗಳ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.





