ಗುಂಟೂರು: ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ರಾಮಕೃಷ್ಣ ಪ್ರಸಾದ್, ರಸ್ತೆ ಅಪಘಾತದಲ್ಲಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಏಪ್ರಿಲ್ 14ರಂದು ಕುಟುಂಬದೊಂದಿಗೆ ಗುಂಟೂರಿಗೆ ಪ್ರಯಾಣಿಸುತ್ತಿದ್ದಾಗ, ಎಟುಕೂರು ರಸ್ತೆಯಲ್ಲಿ ಹಸುವೊಂದು ಅಪಘಾತಕ್ಕೀಡಾಗಿ ನರಳುತ್ತಿರುವುದನ್ನು ಗಮನಿಸಿದರು. ತಕ್ಷಣ ಕಾರನ್ನು ನಿಲ್ಲಿಸಿ, ಹಸುವಿನ ಎಡಗಾಲು ಮುರಿದಿರುವುದನ್ನು ಕಂಡು ಸಂಚಾರಿ ಪೊಲೀಸರಿಗೆ ಕರೆ ಮಾಡಿದರು. ಹಸುವನ್ನು ಗುಂಟೂರು ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಲು ಸೂಚಿಸಿದರು.
ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು, ಹಸು ಚೇತರಿಸಿಕೊಳ್ಳುತ್ತಿರುವುದನ್ನು ಖುದ್ದಾಗಿ ಖಾತ್ರಿಪಡಿಸಿಕೊಂಡರು. ಈ ವೇಳೆ ಹಸುವಿಗೆ ಬಾಳೆಹಣ್ಣು ತಿನ್ನಿಸಿದರು. ಪ್ರಸ್ತುತ ಹಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
