ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನೇ ತಳ್ಳಿದ ನಟಿ ಜಯಾ ಬಚ್ಚನ್: ವೈರಲ್ ಆಯ್ತು ವಿಡಿಯೋ

ಜಅಯಅ

ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿಯನ್ನು ತಳ್ಳಿದ್ದಾರೆ. ಈ ಘಟನೆ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದಿದ್ದು, ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಘಟನೆಯ ವಿವರ

ದೆಹಲಿಯ ಕಾನ್ಸಿಟ್ಯೂಷನ್ ಕ್ಲಬ್‌ನಲ್ಲಿ ರಾಜಕೀಯ ನಾಯಕರು ಹಾಗೂ ಗಣ್ಯರು ಹಾಜರಿದ್ದ ಕಾರ್ಯಕ್ರಮ ನಡೆಯುತ್ತಿತ್ತು. ಜಯಾ ಬಚ್ಚನ್ ಅವರು ಸಹ ತಮ್ಮ ಸಹ ಸಂಸದೆ ಹಾಗೂ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಅಲ್ಲಿದ್ದರು. ಈ ವೇಳೆ, ಕ್ಲಬ್ ಆವರಣದಲ್ಲಿ ಒಬ್ಬ ವ್ಯಕ್ತಿ ಅವರತ್ತ ಬಂದು ಮೊಬೈಲ್ ಕ್ಯಾಮೆರಾವನ್ನು ಹಿಡಿದು ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದರು. ತಕ್ಷಣವೇ ಅವರು ಆ ವ್ಯಕ್ತಿಯನ್ನು ಕೈಯಿಂದ ತಳ್ಳುತ್ತಾ, “ಕ್ಯಾ ಕರ್ ರಹೇ ಹೈ ಆಪ್? ಇದೇನಿದು?” ಎಂದು ಪ್ರಶ್ನಿಸಿದರು. ಈ ವೇಳೆ ತಾಳ್ಮೆ ಕಳೆದುಕೊಂಡು ಕೋಪದಲ್ಲಿ ಮಾತನಾಡಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಜಯಾ ಬಚ್ಚನ್ ಅವರ ಬಳಿಯಲ್ಲೇ ನಿಂತಿದ್ದ ಪ್ರಿಯಾಂಕಾ ಚತುರ್ವೇದಿ, ಈ ಘಟನೆ ನಡೆದ ತಕ್ಷಣ ಸುತ್ತಮುತ್ತ ನೋಡಿಕೊಂಡು, ಯಾವುದೇ ಮಾತಾಡದೆ ಕ್ಲಬ್ ಒಳಗೆ ತೆರಳಿದರು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿ, ಹಂಚಿಕೊಂಡರು. ಹಲವಾರು ನೆಟಿಜನ್‌ಗಳು ಜಯಾ ಬಚ್ಚನ್ ಅವರ ವರ್ತನೆಯನ್ನು ಟೀಕಿಸಿದರು. ಒಬ್ಬ ಬಳಕೆದಾರ  “ನಾವು ಇಷ್ಟಪಡುವ ವ್ಯಕ್ತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ತಪ್ಪೇನಿಲ್ಲ, ಆದರೆ ಹೀಗೆ ತಳ್ಳುವುದು ಅಭಿಮಾನಿಯ ಮನಸ್ಸಿಗೆ ನೋವು ತರುತ್ತದೆ.” ಎಂದು ಬರೆದಿದ್ದಾನೆ. ಮತ್ತೊಬ್ಬರು “ಜನಪ್ರಿಯ ವ್ಯಕ್ತಿಗಳು ಇಂತಹ ಸಂದರ್ಭಗಳಲ್ಲಿ ಸ್ವಲ್ಪ ಶಾಂತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ಇನ್ನೊಬ್ಬ ಬಳಕೆದಾರ ಜಯಾ ಬಚ್ಚನ್ ಪರವಾಗಿ ಬರೆದಿದ್ದಾರೆ – “ಅವರಿಗೂ ಖಾಸಗಿ ವಲಯ ಎಂಬುದು ಇರುತ್ತದೆ. ಯಾರೂ ಅನುಮತಿ ಕೇಳದೆ ಹೀಗೆ ಸೆಲ್ಫಿ ತೆಗೆದುಕೊಳ್ಳಲು ಬಾರದು” ಎಂದು ಹೇಳಿದ್ದಾರೆ. 

Exit mobile version