ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹ-ಭೂಕುಸಿತಕ್ಕೆ 11 ಮಂದಿ ಬಲಿ, ಹಲವರು ನಾಪತ್ತೆ

ಮೇಘಸ್ಫೋಟ (1)

ಶ್ರೀನಗರ, ಜುಲೈ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭೀಕರ ಅವಾಂತರವನ್ನು ಸೃಷ್ಟಿಸಿದೆ. ಭಾರೀ ಮಳೆಯ ಪರಿಣಾಮ ಹಲವು ಪ್ರದೇಶಗಳಲ್ಲಿ ಮೇಘಸ್ಫೋಟ, ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸಿದ್ದು, ಇದುವರೆಗೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿರುವ ಹಿನ್ನೆಲೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು (NDRF ಹಾಗೂ SDRF) ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಗಡಿ ಜಿಲ್ಲೆಗಳಾದ ಪೂಂಚ್, ರಜೌರಿ, ಕಿಸ್ತ್ವಾರ್ ಹಾಗೂ ಉತ್ತರ ಕಾಶ್ಮೀರದ ಬಾಂಡಿಪೋರಾ ಜಿಲ್ಲೆಯ ಗುರೇಜ್ ವಲಯದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಭಾನುವಾರ ಮುಂಜಾನೆ ಗುರೇಜ್‌ನ ದಾವರ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದ ಪ್ರವಾಹ ಏಕಾಏಕಿ ಉಂಟಾಗಿ, ಜಾನುವಾರು ಕೊಟ್ಟಿಗೆ ಸಂಪೂರ್ಣ ಧ್ವಂಸಗೊಂಡಿದೆ. ರಸ್ತೆಯ ದೊಡ್ಡ ಭಾಗ ಕೊಚ್ಚಿಹೋಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಪೂಂಚ್ ಜಿಲ್ಲೆಯ ಸುರನ್‌ಕೋಟ್ ತಹಸಿಲ್‌ನಲ್ಲಿ ಭೂಕುಸಿತ ಮತ್ತು ಮನೆ ಕುಸಿತದ ಘಟನೆಗಳು ಹೆಚ್ಚು ವರದಿಯಾಗಿವೆ. ಮಣ್ಣಿನಡಿ ಸಿಲುಕಿದವರನ್ನು ರಕ್ಷಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ಆಡಳಿತದ ಪ್ರಕಾರ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.

ರಜೌರಿ ಜಿಲ್ಲೆಯಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹದ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದ್ದು, ನೂರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಲವು ರಕ್ಷಣಾ ಗೋಡೆಗಳು ಕುಸಿದ ಪರಿಣಾಮ 200ಕ್ಕೂ ಹೆಚ್ಚು ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ರಜೌರಿ ಪಟ್ಟಣದ ಸಮೀಪ ನದಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅನೇಕ ಗ್ರಾಮಗಳಲ್ಲಿ ವಿದ್ಯುತ್ ಹಾಗೂ ಸಂಪರ್ಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಕೊಚ್ಚಿಹೋಗಿರುವುದರಿಂದ ರಕ್ಷಣಾ ತಂಡಗಳಿಗೆ ತಲುಪುವುದೇ ದೊಡ್ಡ ಸವಾಲಾಗಿದೆ. ಅಗತ್ಯವಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಆಹಾರ, ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸುವ ವ್ಯವಸ್ಥೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ದೆಹಲಿ ಪ್ರವಾಸವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿರುವ ಅವರು, ರಕ್ಷಣಾ ಹಾಗೂ ಪರಿಹಾರ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲು ಸೂಚನೆ ನೀಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಜಿಲ್ಲಾಡಳಿತಕ್ಕೆ ಅಗತ್ಯ ಎಲ್ಲಾ ನೆರವು ಒದಗಿಸಲು ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಕಾರ್ಯ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ಹಾಗೂ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇದೀಗ ಭಾರತೀಯ ಹವಾಮಾನ ಇಲಾಖೆ (IMD) ಜುಲೈ 23ರವರೆಗೆ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ NDRF, SDRF, ಸೇನೆ ಮತ್ತು ಸ್ಥಳೀಯ ಆಡಳಿತವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ನದಿಗಳ ಸಮೀಪ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಡಳಿತ ಮನವಿ ಮಾಡಿದೆ.

ಪ್ರವಾಹ ಮತ್ತು ಭೂಕುಸಿತದಿಂದ ಸಾವಿರಾರು ಜನರ ದೈನಂದಿನ ಬದುಕು ಅಸ್ತವ್ಯಸ್ತಗೊಂಡಿದ್ದು, ಮುಂದಿನ ಕೆಲವು ದಿನಗಳ ಹವಾಮಾನ ಪರಿಸ್ಥಿತಿಯೇ ರಕ್ಷಣಾ ಕಾರ್ಯಾಚರಣೆ ಹಾಗೂ ಹಾನಿಯ ಪ್ರಮಾಣವನ್ನು ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version