ಬದರಿನಾಥ ದೇಗುಲದಲ್ಲಿ ದೇಣಿಗೆ ಕಳ್ಳತನ: ಸಿಸಿಟಿವಿಯಲ್ಲಿ ಬಯಲಾಯ್ತು ಆರೋಪಿಗಳ ಕೃತ್ಯ

ಮೇಘಸ್ಫೋಟ (19)

ಡೆಹ್ರಾಡೂನ್: ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಉತ್ತರಾಖಂಡದ ಬದರಿನಾಥ ದೇಗುಲದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಭಕ್ತರು ಅಪಾರ ಭಕ್ತಿಯಿಂದ ಸಮರ್ಪಿಸಿದ ಕಾಣಿಕೆಗಳ ದುರುಪಯೋಗ ನಡೆದಿರುವ ಆರೋಪದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ದೇವಾಲಯದ ಕಾಣಿಕೆ ಎಣಿಕೆ ವೇಳೆ ನಡೆದಿರುವ ಅಕ್ರಮ ಚಟುವಟಿಕೆಗಳು ಸಿಸಿಟಿವಿ ದೃಶ್ಯಗಳ ಮೂಲಕ ಬಹಿರಂಗವಾಗಿದೆ. 

ಪೊಲೀಸರ ಮಾಹಿತಿ ಪ್ರಕಾರ, ದೇಣಿಗೆ ಕಳವು ಕುರಿತು ದೂರು ದಾಖಲಾಗುತ್ತಿದ್ದಂತೆ ಬದರಿನಾಥ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ವಿಶೇಷ ತನಿಖೆ ಆರಂಭಿಸಲಾಯಿತು. ಮೊದಲ ಹಂತದ ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಮೋದ್ ನೌಟಿಯಾಲ್ ಎಂಬಾತನನ್ನು ಜುಲೈ 12ರಂದು ಬಂಧಿಸಲಾಗಿತ್ತು. ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.

ಇದಾದ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಎಸ್‌ಐಟಿ ಅಧಿಕಾರಿಗಳು ದೇವಾಲಯದ ಥಾಲಿ ಭೇಂಟ್ ಎಣಿಕೆ ಕೊಠಡಿಯ ಸಿಸಿಟಿವಿ ದೃಶ್ಯಗಳನ್ನು ಫ್ರೇಮ್‌-ಬೈ-ಫ್ರೇಮ್ ಪರಿಶೀಲಿಸಿದರು. ಅಲ್ಲದೆ, ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿದರು. ಈ ತನಿಖೆಯ ವೇಳೆ ಹಲವು ಮಹತ್ವದ ಮಾಹಿತಿಗಳು ಹೊರಬಂದಿದ್ದು, ಪ್ರಕರಣದ ಹಿಂದೆ ದೇವಾಲಯದ ಸಿಬ್ಬಂದಿಯೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ತನಿಖೆಯಲ್ಲಿ, ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (BKTC)ಯ ಖಾಯಂ ಸಿಬ್ಬಂದಿಯಾಗಿದ್ದ ಹಾಗೂ ಆ ಸಂದರ್ಭದಲ್ಲಿ ದೇವಾಲಯದ ಅಧಿಕಾರಿಯಾಗಿ ಕಾಣಿಕೆ ಎಣಿಕೆ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದ ರಾಜೇಂದ್ರ ಚೌಹಾಣ್ ಪ್ರಮುಖ ಆರೋಪಿಯಾಗಿರುವುದು ಪತ್ತೆಯಾಗಿದೆ. ಆತ ಪ್ರಮೋದ್ ನೌಟಿಯಾಲ್ ಜೊತೆ ಸೇರಿ ಭಕ್ತರು ಸಮರ್ಪಿಸಿದ್ದ ನಗದು ಹಾಗೂ ಇತರೆ ಕಾಣಿಕೆಗಳ ಒಂದು ಭಾಗವನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆದಿರುವ ಆರೋಪ ಎದುರಿಸುತ್ತಿದ್ದಾನೆ.

ಅಷ್ಟೇ ಅಲ್ಲದೆ, ಕಾಣಿಕೆಗಳೊಂದಿಗೆ ಇದ್ದ ಕೇಸರಿ ವಸ್ತ್ರಗಳನ್ನೂ ಆರೋಪಿಗಳು ತಮ್ಮ ಬಳಿಗೆ ತೆಗೆದುಕೊಂಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ ನಂಬಿಕೆಯ ಪ್ರತೀಕವಾಗಿರುವ ವಸ್ತುಗಳನ್ನೂ ಬಿಡದೇ ಕೃತ್ಯ ಎಸಗಿರುವುದು ಭಕ್ತರಲ್ಲಿ ಆಕ್ರೋಶ ಮೂಡಿಸಿದೆ.

ಬದರಿನಾಥ ದೇವಸ್ಥಾನ ದೇಶದ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ದೇಣಿಗೆ ಸಲ್ಲಿಸುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲೇ ಕಾಣಿಕೆಗಳ ದುರುಪಯೋಗ ನಡೆದಿರುವ ಆರೋಪ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿರುವ ಎಸ್‌ಐಟಿ, ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇತರ ಸಿಬ್ಬಂದಿಯ ಪಾತ್ರವನ್ನೂ ಪರಿಶೀಲಿಸುತ್ತಿದೆ. ಈ ಅಕ್ರಮದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಕಳುವಾಗಿರುವ ದೇಣಿಗೆಯ ಮೊತ್ತ ಎಷ್ಟು? ಎಷ್ಟು ದಿನಗಳಿಂದ ಈ ರೀತಿಯ ಅಕ್ರಮ ನಡೆಯುತ್ತಿತ್ತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಮುಂದುವರಿದಿದೆ.

ಪೊಲೀಸರ ಪ್ರಕಾರ, ಡಿಜಿಟಲ್ ಸಾಕ್ಷ್ಯಗಳು, ಬ್ಯಾಂಕ್ ವ್ಯವಹಾರಗಳ ವಿವರಗಳು ಹಾಗೂ ಸಿಬ್ಬಂದಿಯ ಹೇಳಿಕೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ಬಂಧನಗಳ ಸಾಧ್ಯತೆಯನ್ನೂ ಅಧಿಕಾರಿಗಳು ತಳ್ಳಿಹಾಕಿಲ್ಲ. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬಂದ ಬಳಿಕ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Exit mobile version