ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ: ಹಠಾತ್ ಪ್ರವಾಹಕ್ಕೆ ದೋಡಾದಲ್ಲಿ 10ಕ್ಕೂ ಹೆಚ್ಚು ಮನೆಗಳು ನಾಶ

ದೋಡಾದಲ್ಲಿ 10ಕ್ಕೂ ಹೆಚ್ಚು ಮನೆಗಳು ಧ್ವಂಸ, ಭಾರೀ ಮಳೆ ಎಚ್ಚರಿಕೆ

1 2025 08 26t152817.742

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ 10ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಭಾರತೀಯ ಹವಾಮಾನ ಇಲಾಖೆ (IMD) ಇತ್ತೀಚೆಗೆ ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು, ಈ ಎಚ್ಚರಿಕೆಯ ಬೆನ್ನಲ್ಲೇ ಈ ದುರಂತ ಸಂಭವಿಸಿದೆ.

ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹವು 10ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದ್ದು, ಈವರೆಗೆ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲಅಧಿಕಾರಿಗಗಳು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಜಮ್ಮುವಿನಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ, ಪ್ರವಾಹದ ಎಚ್ಚರಿಕೆಯನ್ನು ಜಾರಿಗೊಳಿಸಲಾಗಿದ್ದು, ಜನರಿಗೆ ಭೂಕುಸಿತದ ಅಪಾಯವಿರುವ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಲಾಗಿದೆ.

ತಾವಿ ನದಿ ಸೇರಿದಂತೆ ಹಲವು ನದಿಗಳು ಮತ್ತು ಹೊಳೆಗಳು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿವೆ, ಮತ್ತು ರಾತ್ರಿಯ ವೇಳೆಗೆ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಎತ್ತರದ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಝೀಲಂ ನದಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿಲ್ಲವಾದರೂ, ನೀರಿನ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ. ಮಧ್ಯ ಕಾಶ್ಮೀರದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಿದ್ದರೆ, ಉತ್ತರ ಕಾಶ್ಮೀರದಲ್ಲಿ ಹಗುರ ಮಳೆ ಅಥವಾ ಒಣಗಿದ ಹವಾಮಾನ ಕಂಡುಬಂದಿದೆ.

Exit mobile version