ಇಸ್ರೇಲ್-ಇರಾನ್ ವಾರ್‌: 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ

ಟೆಹರಾನ್‌, ಮಾ.1: ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬೆನ್ನಲ್ಲೇ, 15 ಭಾರತೀಯರನ್ನು ಒಳಗೊಂಡ ತೈಲ ಟ್ಯಾಂಕರ್ ಮೇಲೆ ಒಮಾನ್‌ನ ಮುಸಂದಮ್ ಪರ್ಯಾಯ ದ್ವೀಪದ ಸಮೀಪ ದಾಳಿ ನಡೆದಿದ್ದು, ನಾಲ್ವರು ನಾವಿಕರು ಗಾಯಗೊಂಡಿದ್ದಾರೆ…

ಇಸ್ರೇಲ್–ಅಮೆರಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದ್ದು, ಕೊಲ್ಲಿ ರಾಷ್ಟ್ರಗಳ ಮೇಲೂ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ.

ಮುಸಂದಮ್ ಸಮೀಪ ದಾಳಿ

ದಾಳಿಗೊಳಗಾದ ‘ಸ್ಕೈಲೈಟ್’ ಹೆಸರಿನ ತೈಲ ಹಡಗು ಒಮಾನ್‌ನ ಮುಸಂದಮ್ ಪರ್ಯಾಯ ದ್ವೀಪದ ಖಾಸಬ್ ಬಂದರಿನಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ಸಾಗುತ್ತಿತ್ತು. ಒಮಾನ್ ಕಡಲ ಭದ್ರತಾ ಕೇಂದ್ರ ‘ಎಕ್ಸ್’ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಹಡಗಿನಲ್ಲಿ 15 ಭಾರತೀಯರು ಹಾಗೂ ಐದು ಇರಾನ್ ಪ್ರಜೆಗಳು ಇದ್ದರು ಎಂದು ತಿಳಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಹಡಗಿನಿಂದ ದಟ್ಟ ಕಪ್ಪು ಹೊಗೆ ಎದ್ದಿರುವುದು ಹಾಗೂ ಡೆಕ್ ಭಾಗದಲ್ಲಿ ಬೆಂಕಿ ಜ್ವಾಲೆಗಳು ಕಾಣಿಸಿಕೊಳ್ಳುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ. ದಾಳಿ ಹೇಗೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಡ್ರೋನ್ ದಾಳಿಯ ಸಾಧ್ಯತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಗಾಯಾಳುಗಳ ಸ್ಥಿತಿ

ದಾಳಿಯಲ್ಲಿ ನಾಲ್ವರು ನಾವಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳಾಂತರಿಸಿ ಸಮೀಪದ ಬಂದರಿಗೆ ಕರೆದೊಯ್ಯಲಾಗಿದೆ. ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹಡಗಿನಿಂದ ಇಳಿಸಲಾಗಿದೆ. ಟ್ಯಾಂಕರ್‌ಗೆ ಆಗಿರುವ ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ. ಇರಾನ್ ಸರ್ಕಾರದಿಂದ ಈ ಘಟನೆಯ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇರಾನ್ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸುವ ಬಗ್ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ದಾಳಿ ಮತ್ತಷ್ಟು ಆತಂಕ ಹುಟ್ಟಿಸಿದೆ.

ಡುಕ್ಮ್ ಬಂದರಿನಲ್ಲಿ ಡ್ರೋನ್ ದಾಳಿ

ಇದಕ್ಕೂ ಮುನ್ನ ಒಮಾನ್‌ನ ಡುಕ್ಮ್ ವಾಣಿಜ್ಯ ಬಂದರಿಗೆ ಎರಡು ಡ್ರೋನ್‌ಗಳು ಡಿಕ್ಕಿ ಹೊಡೆದಿರುವುದಾಗಿ ರಾಜ್ಯ ಸುದ್ದಿಸಂಸ್ಥೆ ವರದಿ ಮಾಡಿತ್ತು. ಘಟನೆಯಲ್ಲಿ ಒಬ್ಬ ವಲಸಿಗ ಕಾರ್ಮಿಕ ಗಾಯಗೊಂಡಿದ್ದು, ಮತ್ತೊಂದು ಡ್ರೋನ್‌ನ ಅವಶೇಷ ಇಂಧನ ಸಂಗ್ರಹ ಟ್ಯಾಂಕ್‌ಗಳ ಬಳಿ ಪತ್ತೆಯಾಗಿದೆ

ಪ್ರತೀಕಾರದ ಎಚ್ಚರಿಕೆ

ಇಸ್ರೇಲ್–ಅಮೆರಿಕ ದಾಳಿಯಲ್ಲಿ 40ಕ್ಕೂ ಅಧಿಕ ಇರಾನ್ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಅಮೆರಿಕ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಕೊಲ್ಲಿ ರಾಷ್ಟ್ರಗಳ ಮೇಲೂ ಕ್ಷಿಪಣಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

Exit mobile version