ಅಖಿಲೇಶ್ ಯಾದವ್ ರೋಡ್‌ಶೋ ವೇಳೆ ದುರಂತ: ಬುಲ್ಡೋಜರ್ ಡಿಕ್ಕಿಯಾಗಿ ಬಿಜೆಪಿ ನಾಯಕನ ಪುತ್ರ ಸಾವು

Untitled design 2026 11 19T141835.674

ಗೋರಖ್‌ಪುರ: ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರೋಡ್‌ಶೋ ವೇಳೆ ಭೀಕರ ದುರಂತ ಸಂಭವಿಸಿದೆ. ರ್ಯಾಲಿಯಲ್ಲಿ ಹೂವುಗಳನ್ನು ಸುರಿಸುತ್ತಿದ್ದ ಬುಲ್ಲೋಜರ್ ಡಿಕ್ಕಿಯಾಗಿ ಸ್ಥಳೀಯ ಬಿಜೆಪಿ ನಾಯಕನ ಪುತ್ರ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. 

ಮೃತ ಯುವಕನನ್ನು ಚೌರಿ ಚೌರಾದ ರಾಜಧಾನಿ ಗ್ರಾಮದ ನಿವಾಸಿ ಆರ್ಯವರ್ಧನ್ ಸಿಂಗ್ ಎಂದು ಗುರುತಿಸಲಾಗಿದೆ. ಸಮಾಜವಾದಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ಪಿಡಿಎ ರಥಯಾತ್ರೆ’ಯ ಭಾಗವಾಗಿ ಗೋರಖ್‌ಪುರದ ಕೂಡುಘಾಟ್ ಪ್ರದೇಶದಲ್ಲಿ ರ್ಯಾಲಿ ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಹೂವು ಸುರಿಸುತ್ತಿದ್ದ ಬುಲ್ಲೋಜರ್‌ನಿಂದ ಅವಘಡ

ಲಭ್ಯವಿರುವ ಮಾಹಿತಿಯ ಪ್ರಕಾರ, ಅಖಿಲೇಶ್ ಯಾದವ್ ಅವರ ರೋಡ್‌ಶೋ ಸಾಗುತ್ತಿದ್ದ ವೇಳೆ ಬುಲ್ಲೋಜರ್ ಮೂಲಕ ರ್ಯಾಲಿಯ ಮೇಲೆ ಹೂವುಗಳನ್ನು ಸುರಿಸಲಾಗುತ್ತಿತ್ತು. ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ ಬಳಿಕ ವೇಗವಾಗಿ ಬಂದ ಬುಲ್ಲೋಜರ್ ಹಿಂದಿನಿಂದ ಆರ್ಯವರ್ಧನ್ ಸಿಂಗ್ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ್ದಾರೆ. ಪರಿಣಾಮ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ತಂದೆಯಿಂದ ಗಂಭೀರ ಆರೋಪ

ಮೃತ ಆರ್ಯವರ್ಧನ್ ಅವರ ತಂದೆ ಓಂಕಾರ್ ಸಿಂಗ್ ಘಟನೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ರೋಡ್‌ಶೋ ವೇಳೆ ಜನರ ನಡುವೆ ಬುಲ್ಲೋಜರ್‌ನಂತಹ ಭಾರೀ ವಾಹನವನ್ನು ವೇಗವಾಗಿ ಚಲಾಯಿಸಲು ಅವಕಾಶ ನೀಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ ಬೆನ್ನಲ್ಲೇ ಹಿಂದಿನಿಂದ ಬಂದ ಬುಲ್ಲೋಜರ್ ತಮ್ಮ ಮಗನಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿದ್ದಾರೆ.

 ಕುಟುಂಬಕ್ಕೆ ಸಾಂತ್ವನ, ನೆರವಿನ ಭರವಸೆ

ಘಟನೆ ತಿಳಿಯುತ್ತಿದ್ದಂತೆ ಗೋರಖ್‌ಪುರ ಶಾಸಕ ಎಂಜಿನಿಯರ್ ಸರ್ವಣ್ ನಿಷಾದ್ ಅವರು ಮೃತ ಯುವಕನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸಚಿವ ಡಾ. ಸಂಜಯ್ ನಿಷಾದ್ ಕೂಡ ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ಒದಗಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ-ಸಮಾಜವಾದಿ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪ

ಇನ್ನೊಂದೆಡೆ, ಈ ಸಾವಿನ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಆರ್ಯವರ್ಧನ್ ಸಿಂಗ್ ಸ್ಥಳೀಯ ಬಿಜೆಪಿ ನಾಯಕನ ಪುತ್ರ ಎಂಬ ಹಿನ್ನೆಲೆ ಉತ್ತರ ಪ್ರದೇಶ ಬಿಜೆಪಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ದುರಂತಕ್ಕೆ ಸಮಾಜವಾದಿ ಪಕ್ಷದ ಗೂಂಡಾಗಿರಿಯೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಆದರೆ, ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ಯುವಕ ಮೃತಪಟ್ಟಿರುವ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ರೋಡ್‌ಶೋಗೆ ಆಡಳಿತ ಸರಿಯಾದ ವ್ಯವಸ್ಥೆ ಕಲ್ಪಿಸದಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version