“ನಾವು ಯುದ್ಧ ನಿಲ್ಲಿಸಲು ಸಿದ್ಧ, ಆದರೆ ಗೌರವಯುತ ಒಪ್ಪಂದ ಬೇಕು”: ಇರಾನ್

Untitled design 2026 03 05T085858.931

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ಸೈನಿಕ ದಾಳಿಗಳ ಹಿನ್ನೆಲೆದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇರಾನ್ ಈಗ ಶಾಂತಿ ಮಾತುಕತೆಗಳ ಕುರಿತು ಮಹತ್ವದ ಹೇಳಿಕೆಯನ್ನು ನೀಡಿದೆ. “ನಾವು ಯುದ್ಧ ನಿಲ್ಲಿಸಲು ಸಿದ್ಧ. ಆದರೆ ಅದು ಗೌರವಯುತವಾಗಿರಬೇಕು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿರಬಾರದು” ಎಂದು ಇರಾನ್ ಸರ್ವೋಚ್ಚ ನಾಯಕನ ವಿಶೇಷ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಂ ಇಲಾಹಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ “ಇನ್ನೂ ಒಂದು ತಿಂಗಳು ಸೈನಿಕ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ಘೋಷಿಸಿದ ಬೆನ್ನಲ್ಲೇ ಇರಾನ್‌ನಿಂದ ಈ ಶಾಂತಿ ಸಂದೇಶ ಹೊರಬಂದಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದಾಳಿಗಳು ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಶಾಂತಿ ಮಾತುಕತೆಯ ಪ್ರಸ್ತಾಪವು ಒಂದು ಮಹತ್ವದ ತಿರುವಾಗಿ ಕಾಣುತ್ತಿದೆ..

ಎಎನ್‌ಐಗೆ ನೀಡಿದ ಸಂದರ್ಶನ

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಕೀಂ ಇಲಾಹಿ ಸ್ಪಷ್ಟಪಡಿಸಿದ್ದು, “ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲಿನ ದಾಳಿಗಳನ್ನು ತಕ್ಷಣ ನಿಲ್ಲಿಸಿದರೆ ಹಾಗೂ ಈಗ ಹೇರಲಾಗಿರುವ ಎಲ್ಲಾ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿದರೆ, ನಾವು ಕೂಡ ದಾಳಿಯನ್ನು ಸ್ಥಗಿತಗೊಳಿಸಿ ಮಾತುಕತೆಗೆ ಸಿದ್ಧರಾಗುತ್ತೇವೆ” ಎಂದಿದ್ದಾರೆ.

 “ಮಾತುಕತೆ ಗೌರವಯುತವಾಗಿರಬೇಕು. ಇರಾನ್‌ನ ಹಕ್ಕುಗಳನ್ನು ಕಾಪಾಡುವ ರೀತಿಯ ಒಪ್ಪಂದವೇ ನಮಗೆ ಸ್ವೀಕಾರಾರ್ಹ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸರ್ವಭೌಮತ್ವವನ್ನು ಯಾವುದೇ ಕಾರಣಕ್ಕೂ ಬಲಿ ಕೊಡಲಾಗುವುದಿಲ್ಲ” ಎಂದು ಕಠಿಣವಾಗಿ ತಿಳಿಸಿದ್ದಾರೆ.

ಯುದ್ಧ ನಿಲ್ಲಿಸುವ ಜವಾಬ್ದಾರಿ ಅಮೆರಿಕದ್ದೇ

ಹಕೀಂ ಇಲಾಹಿ ತಮ್ಮ ಹೇಳಿಕೆಯಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಉಲ್ಲೇಖಿಸಿದ್ದಾರೆ. “ಈ ಯುದ್ಧವನ್ನು ಪ್ರಾರಂಭಿಸಿದ್ದು ಅಮೆರಿಕ. ಆದ್ದರಿಂದ ಅದನ್ನು ನಿಲ್ಲಿಸುವ ಮೊದಲ ಹೆಜ್ಜೆಯನ್ನೂ ಅವರು ಹಾಕಬೇಕು” ಎಂದು ಅವರು ಆರೋಪಿಸಿದ್ದಾರೆ. ದಾಳಿಗಳ ಆರಂಭದಿಂದಲೇ ಇರಾನ್ ತನ್ನ ಭೂಮಿಯನ್ನು ಮತ್ತು ಜನರನ್ನು ರಕ್ಷಿಸಲು ಪ್ರತಿರೋಧ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜಿನೇವಾ ಮಾತುಕತೆ ಸ್ಮರಣೆ

ಹಕೀಂ ಇಲಾಹಿ ತಮ್ಮ ಮಾತಿನಲ್ಲಿ ಹಿಂದಿನ ಮಾತುಕತೆಗಳನ್ನೂ ಸ್ಮರಿಸಿದರು. ಒಮಾನ್ ಮಧ್ಯಸ್ಥಿಕೆಯಲ್ಲಿ ಜಿನೇವಾ ನಗರದಲ್ಲಿ ನಡೆದ ಮಾತುಕತೆ ಅಂತಿಮ ಹಂತ ತಲುಪಿತ್ತು ಎಂದು ಅವರು ಹೇಳಿದರು. “ಅಮೆರಿಕದ ವಿದೇಶಾಂಗ ಸಚಿವರೂ ಒಪ್ಪಂದದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ನಾವು ಮತ್ತು ಅಮೆರಿಕ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿ ಸಂಘರ್ಷಕ್ಕೆ ಅಂತ್ಯ ಘೋಷಿಸಲು ಸಿದ್ಧವಾಗಿದ್ದೆವು” ಎಂದು ಅವರು ತಿಳಿಸಿದ್ದಾರೆ.

Exit mobile version