ನವದೆಹಲಿ: ಭಾರತದ ಸೌರ ಶಕ್ತಿ ಪ್ರಗತಿ ಮತ್ತು ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ISA) 8ನೇ ಅಧಿವೇಶನದಲ್ಲಿ, 125ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಸೌರ ಮಾದರಿಯನ್ನು ಕುತೂಹಲದಿಂದ ವೀಕ್ಷಿಸಿದ್ದು, ಸುಮಾರು 50 ದೇಶಗಳು ತಮ್ಮ ರಾಷ್ಟ್ರಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲು ಆಸಕ್ತಿ ವ್ಯಕ್ತಪಡಿಸಿವೆ.
ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಈ ಅಧಿವೇಶನಕ್ಕೆ 30ಕ್ಕೂ ಹೆಚ್ಚು ಮಂತ್ರಿಗಳು ಮತ್ತು 550ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ‘ಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್’ ದೃಷ್ಟಿಕೋನವನ್ನು ಬೆಂಬಲಿಸಿ 120ಕ್ಕೂ ಹೆಚ್ಚು ದೇಶಗಳು ಸೌರಶಕ್ತಿಯಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ವೇಗಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಅನೇಕ ದೇಶಗಳ ಪ್ರತಿನಿಧಿಗಳು ಭಾರತದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿರುವ ‘ಸೂರ್ಯ ಘರ್’ ಮತ್ತು ‘ಪಿಎಂ ಕುಸುಮ್’ ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಂಡು, ತಮ್ಮ ದೇಶಗಳಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲು ಭಾರತದ ತಾಂತ್ರಿಕ ಮತ್ತು ಕಾರ್ಯರೂಪದ ನೆರವು ಕೋರಿದರು.
ಈ ವೇಳೆಗೆ, ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಅನೇಕ ದೇಶಗಳ ಮಂತ್ರಿಗಳು ಭೇಟಿ ಮಾಡಿ ತಮ್ಮ ಅಗತ್ಯಗಳನ್ನು ಮುಂದಿಟ್ಟರು. ಆಂಟಿಗುವಾ ಮತ್ತು ಬಾರ್ಬುಡಾ, ಶ್ರೀಲಂಕಾ, ಮಾಲ್ಡೀವ್ಸ್, ಫಿಜಿ, ಸೊಮಾಲಿಯಾ, ಲೈಬೀರಿಯಾ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಸಚಿವ ಜೋಶಿ ಅವರೊಂದಿಗೆ ಚರ್ಚೆ ನಡೆಸಿದರು. ಸಣ್ಣ ಮತ್ತು ದ್ವೀಪ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಸೌರ ಶಕ್ತಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಭಾರತದ ಸಹಾಯಕ್ಕೆ ಮುಖ್ಯವಾಗಿ ಮೊರೆಯಿಟ್ಟಿದ್ದು ಕಂಡುಬಂತು. ಸಚಿವ ಜೋಶಿ ಅವರು ISA ಮೂಲಕ ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಭಾರತದ ಯಶಸ್ವಿ ಯೋಜನೆಗಳನ್ನು ಪುನರಾವರ್ತಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ವಿಶ್ವದ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ, 2030ರ ಗುರಿಗಿಂತ 5 ವರ್ಷಗಳ ಮುಂಚೆಯೇ ಪಳೆಯುಳಿಕೆಯೇತರ ಮೂಲಗಳಿಂದ 50% ಇಂಧನ ಸಾಮರ್ಥ್ಯದ ಗುರಿ ಸಾಧಿಸಿದೆ. ಸೌರ ಶಕ್ತಿಯಿಂದ ಸುಮಾರು ₹4 ಲಕ್ಷ ಕೋಟಿ (USD 46 ಬಿಲಿಯನ್) ಮೌಲ್ಯದ ಪಳೆಯುಳಿಕೆ ಇಂಧನ ಆಮದನ್ನು ತಪ್ಪಿಸಲಾಗಿದೆ ಮತ್ತು 1,08,000 GWhಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
 
			
 
					




 
                             
                             
                             
                             
                            