ಅಹಮದಾಬಾದ್: ಅಹಮದಾಬಾದ್‌ನ ಸಬರಮತಿ ನದಿ ದಂಡೆಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಜಂಟಿಯಾಗಿ ಭಾಗವಹಿಸಿ ಗಾಳಿಪಟ ಹಾರಿಸುವ ಮೂಲಕ ಗಮನ ಸೆಳೆದರು.
ಉತ್ಸವದಲ್ಲಿ ಇಬ್ಬರು ನಾಯಕರು ಆಂಜನೇಯ (ಹನುಮಂತ)ನ ಭಾವಚಿತ್ರ ಹೊಂದಿರುವ ವಿಶಿಷ್ಟ ಗಾಳಿಪಟವನ್ನು ಹಾರಿಸಿದರು. ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಪರಂಪರೆಯನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ ಹಾಗೂ ಚಾನ್ಸೆಲರ್ ಮೆರ್ಜ್ ಜಂಟಿಯಾಗಿ ಉತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇಶಿ-ವಿದೇಶಿ ಗಾಳಿಪಟ ಉತ್ಸಾಹಿಗಳು, ಕಲಾವಿದರು ಮತ್ತು ಸಾವಿರಾರು ಪ್ರೇಕ್ಷಕರು ಹಾಜರಿದ್ದು, ಉತ್ಸವಕ್ಕೆ ಮೆರುಗು ತಂದರು. ಮೂರು ದಿನಗಳ ಕಾಲ ನಡೆಯಲಿರುವ ಈ ಗಾಳಿಪಟ ಉತ್ಸವವು ಜನವರಿ 14ರಂದು ಮುಕ್ತಾಯಗೊಳ್ಳಲಿದೆ.
ಈ ಬಾರಿ ಉತ್ಸವಕ್ಕೆ ವಿಶ್ವದಾದ್ಯಂತ ಭರ್ಜರಿ ಪ್ರತಿಕ್ರಿಯೆ ಲಭಿಸಿದ್ದು, 50ಕ್ಕೂ ಹೆಚ್ಚು ದೇಶಗಳಿಂದ 135 ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವ ತಜ್ಞರು ಭಾಗವಹಿಸಿದ್ದಾರೆ. ಜೊತೆಗೆ, ಭಾರತದ ವಿವಿಧ ರಾಜ್ಯಗಳಿಂದ 65 ಗಾಳಿಪಟ ಕಲಾವಿದರು ಹಾಗೂ ಗುಜರಾತ್‌ನಿಂದಲೇ 871 ಸ್ಥಳೀಯ ಸ್ಪರ್ಧಿಗಳು ಭಾಗಿಯಾಗಿರುವುದು ಉತ್ಸವದ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಉತ್ಸವದ ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಇದು ಚಾನ್ಸೆಲರ್ ಮೆರ್ಜ್ ಅವರ ಭಾರತಕ್ಕೆ ಮೊದಲ ಭೇಟಿ ಆಗಿದ್ದು, ಈ ಭೇಟಿ ಭಾರತ-ಜರ್ಮನಿ ನಡುವಿನ ಬಲಿಷ್ಠ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆಯಾಮ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ, ಭಾರತ ಮತ್ತು ಜರ್ಮನಿ ನಡುವಿನ 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳು ಹಾಗೂ 25 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆ ಆಚರಣೆಯ ಮಹತ್ವವೂ ಗಮನ ಸೆಳೆದಿದೆ.
ಗುಜರಾತ್‌ಗೆ ಆಗಮಿಸಿದ ಚಾನ್ಸೆಲರ್ ಮೆರ್ಜ್ ಅವರನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಆತ್ಮೀಯವಾಗಿ ಸ್ವಾಗತಿಸಿದರು. ಈ ಕುರಿತು ವಿದೇಶಾಂಗ ಸಚಿವಾಲಯವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿರುವ ಚಾನ್ಸೆಲರ್ ಮೆರ್ಜ್ ಅವರು ಜನವರಿ 12 ರಿಂದ 13ರವರೆಗೆ ದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಧಿಯಲ್ಲಿ ಗಾಂಧಿನಗರದ ಮಹಾತ್ಮಮಂದಿರದಲ್ಲಿ ಇಬ್ಬರು ನಾಯಕರು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಈ ಮಾತುಕತೆಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಹಾಗೂ ಚಲನಶೀಲತೆ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ರಕ್ಷಣೆ ಮತ್ತು ಭದ್ರತೆ, ವಿಜ್ಞಾನ ಮತ್ತು ಸಂಶೋಧನೆ, ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ, ಹಾಗೂ ಜನರಿಂದ ಜನರ ನಡುವಿನ ಸಂಪರ್ಕ ಬಲಪಡಿಸುವುದರ ಮೇಲೂ ಇಬ್ಬರು ನಾಯಕರು ವಿಶೇಷ ಒತ್ತು ನೀಡಲಿದ್ದಾರೆ.
