ನವದೆಹಲಿ, ಡಿಸೆಂಬರ್ 6: ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯು ದೇಶಾದ್ಯಂತ ಎದುರಿಸುತ್ತಿರುವ ಐದನೇ ದಿನದ ವಿಳಂಬ ಮತ್ತು ವ್ಯಾಪಕ ವಿಮಾನ ರದ್ದತಿ ಬಿಕ್ಕಟ್ಟಿನ (IndiGo Crisis) ಹಿನ್ನೆಲೆಯಲ್ಲಿ, ಕೆಲವು ವಿಮಾನಯಾನ ಸಂಸ್ಥೆಗಳು ಇದರ ಲಾಭ ಪಡೆದು ಟಿಕೆಟ್ ದರಗಳನ್ನು ಅಸಾಧಾರಣವಾಗಿ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಇಂದು ವಿಮಾನ ದರಗಳ ಮೇಲೆ ತಕ್ಷಣದ ಮಿತಿಯನ್ನು (Fare Cap) ಘೋಷಿಸಿದೆ. ಪ್ರಯಾಣಿಕರ ಶೋಷಣೆಯನ್ನು ತಡೆಗಟ್ಟಲು ಸರ್ಕಾರವು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನಯಾನದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ನೂರಾರು ವಿಮಾನಗಳು ರದ್ದಾಗಿವೆ. ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆಗಳು ಮತ್ತು ಆಂತರಿಕ ಸಂಘರ್ಷಗಳು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಒಂದೇ ದಿನ ಸುಮಾರು 1,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಇದು ಹಬ್ಬದ ಸೀಸನ್‌ನಲ್ಲಿ ಮತ್ತು ವರ್ಷಾಂತ್ಯದ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ.
ಒಂದು ಕಡೆ ಇಂಡಿಗೋ ವಿಮಾನಗಳು ರದ್ದಾಗುತ್ತಿದ್ದರೆ, ಇನ್ನೊಂದೆಡೆ ಇತರೆ ವಿಮಾನಯಾನ ಸಂಸ್ಥೆಗಳು ರದ್ದಾದ ಮಾರ್ಗಗಳಲ್ಲಿನ ಟಿಕೆಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಕೆಲವು ಪ್ರಮುಖ ಮಾರ್ಗಗಳಲ್ಲಿ ವಿಮಾನ ಟಿಕೆಟ್ ಬೆಲೆಗಳು ಸಾಮಾನ್ಯ ಮಟ್ಟಕ್ಕಿಂತ 4 ಪಟ್ಟು ಹೆಚ್ಚು ತಲುಪಿದ್ದು, ಪ್ರಯಾಣಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ. ದೆಹಲಿ-ಮುಂಬೈ, ಬೆಂಗಳೂರು-ಹೈದರಾಬಾದ್ ಮತ್ತು ಚೆನ್ನೈ-ಕೋಲ್ಕತ್ತಾದಂತಹ ಪ್ರಮುಖ ದೇಶೀಯ ಮಾರ್ಗಗಳಲ್ಲಿ ಈ ದರ ಏರಿಕೆ ಅತ್ಯಂತ ತೀವ್ರವಾಗಿದ್ದು, ಸೀಟುಗಳನ್ನು ಕಾಯ್ದಿರಿಸಲು ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಪ್ರಯಾಣಿಕರು ಮತ್ತು ಅನಿವಾರ್ಯವಾಗಿ ಪ್ರಯಾಣಿಸಬೇಕಿದ್ದ ಸಾವಿರಾರು ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸಿತು. ಇಂಡಿಗೋ ಬಿಕ್ಕಟ್ಟನ್ನು ಬಳಸಿಕೊಂಡು ಕೆಲವು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನ ದರಗಳನ್ನು ವಿಧಿಸುತ್ತಿರುವುದನ್ನು ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ, ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಯಾಣಿಕರನ್ನು ಅತಿಯಾದ ಶುಲ್ಕ ವಿಧಿಸುವುದರಿಂದ ರಕ್ಷಿಸಲು ಮತ್ತು ಬೆಲೆಗಳ ಶಿಸ್ತನ್ನು ಕಾಪಾಡಿಕೊಳ್ಳಲು ವಿಮಾನ ದರಗಳನ್ನು ಮಿತಿಗೊಳಿಸುವ ಬಗ್ಗೆ ತಕ್ಷಣದ ನಿರ್ದೇಶನಗಳನ್ನು ಹೊರಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಈ ಮೂಲಕ, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಯಾಣಿಸುವ ಜನರನ್ನು ಆರ್ಥಿಕ ಶೋಷಣೆಯಿಂದ ಪಾರು ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ನಿರ್ಬಂಧಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಆನ್‌ಲೈನ್ ಪ್ರಯಾಣ ಪ್ಲಾಟ್‌ಫಾರ್ಮ್‌ಗಳು (Online Travel Platforms – OTAs) ಸಚಿವಾಲಯದ ತೀವ್ರ ಪರಿಶೀಲನೆಗೆ ಒಳಪಡುತ್ತವೆ. ಇನ್ನು ಮುಂದೆ, ಪ್ರತಿ ಮಾರ್ಗದ ದರದ ಮಟ್ಟವನ್ನು ನೈಜ ಸಮಯದಲ್ಲಿ (Real-Time) ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುವುದು. ವಿಧಿಸಲಾದ ಮಿತಿಗಳನ್ನು ಮೀರಿ ದರಗಳನ್ನು ವಿಧಿಸುವ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಕಳೆದ ಐದು ದಿನಗಳಿಂದ ವಿಮಾನ ನಿಲ್ದಾಣಗಳಲ್ಲಿ ಕಾದು ಕುಳಿತು, ತಮ್ಮ ಪ್ರಯಾಣದ ಯೋಜನೆಗಳು ಹಾಳಾಗಿ, ಆರ್ಥಿಕ ಹೊರೆಗೆ ಸಿಲುಕಿದ್ದ ಪ್ರಯಾಣಿಕರಿಗೆ ಸರ್ಕಾರದ ಈ ಕ್ರಮವು ದೊಡ್ಡ ಪರಿಹಾರ ತಂದಿದೆ. ದರ ಮಿತಿಯಿಂದ, ಈಗಾಗಲೇ ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಸಾಕಾಷ್ಟು ನಷ್ಟವಾಗಿರೋ ಜನರಿಗೆ ಈ ಆದೇಶವು ಸಹಾಯಕವಾಗಿದೆ.
ಪ್ರಯಾಣಿಕರು ತಮ್ಮ ಬುಕಿಂಗ್ ಮಾಡುವಾಗ ದರ ಮಿತಿಯನ್ನು ಪರಿಶೀಲಿಸಬೇಕು ಮತ್ತು ಅತಿಯಾದ ದರವನ್ನು ವಿಧಿಸಿದರೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಸರ್ಕಾರ ಮತ್ತೊಮ್ಮೆ ಒತ್ತಿ ಹೇಳಿದೆ. ಇಂಡಿಗೋ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ತಿಳಿದುಬಂದಿದೆ.
