ಅಮೆರಿಕಾದಲ್ಲಿ ಮನೆಗೆ ಬೆಂಕಿ ತಗುಲಿ ಭಾರತೀಯ ಯುವತಿ ಸಜೀವ ದಹನ

Untitled design 2025 12 06T173743.038

ಅಮೆರಿಕ, ಡಿಸೆಂಬರ್ 6: ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿ ನಗರದಲ್ಲಿ ನಡೆದ ಒಂದು ಭೀಕರ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರನ್ನು ಸಹಜಾ ರೆಡ್ಡಿ ಉದುಮಲ ಎಂದು ಗುರುತಿಸಲಾಗಿದೆ. ಅವರು ಆಲ್ಬನಿ ನಗರದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದರು. ಸಹಜಾ ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಮಿಷನ್ ಖಚಿತಪಡಿಸಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯು ‘X’ (ಹಿಂದಿನ ಟ್ವಿಟರ್) ಮೂಲಕ ಈ ದುರ್ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಆಲ್ಬನಿಯಲ್ಲಿ ಸಂಭವಿಸಿದ ಮನೆಯ ಬೆಂಕಿ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಸಹಜಾ ರೆಡ್ಡಿ ಉದುಮಲ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತರಾಗಿದ್ದೇವೆ ಎಂದು ಕಾನ್ಸುಲೇಟ್ ಹೇಳಿದೆ.

ಈ ಸಮಯದಲ್ಲಿ ಸಹಜಾ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ ಕಾನ್ಸುಲೇಟ್, ಈ ದುರಂತದ ನಂತರ ಉದುಮಲ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹವನ್ನು ಭಾರತಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಬೆಂಬಲವನ್ನು ಒದಗಿಸುತ್ತೇವೆ ಎಂದು ಮಾಹಿತಿ ನೀಡಿದೆ.

ಈ ಭೀಕರ ಅಗ್ನಿ ದುರಂತವು ಡಿಸೆಂಬರ್ 4 ರ ಬೆಳಿಗ್ಗೆ ಆಲ್ಬನಿಯ ವಸತಿ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಬನಿ ಪೊಲೀಸ್ ಇಲಾಖೆ ಮತ್ತು ಅಲ್ಬನಿ ಅಗ್ನಿಶಾಮಕ ದಳದವರು ಬೆಂಕಿಯ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದಾಗ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು, ಆ ವಸತಿ ಮನೆ ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಮುಳುಗಿರುವುದನ್ನು, ಮನೆಯೊಳಗೆ ಇನ್ನೂ ಹಲವಾರು ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು.

ಅಗ್ನಿಶಾಮಕ ದಳದವರು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿ, ಮನೆಯೊಳಗೆ ಸಿಲುಕಿದ್ದ ನಾಲ್ಕು ಜನರನ್ನು ಪತ್ತೆಹಚ್ಚಿ ಹೊರತರಲು ಯಶಸ್ವಿಯಾದರು. ಈ ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದರು. ತುರ್ತು ವೈದ್ಯಕೀಯ ಸಿಬ್ಬಂದಿ (EMS) ಸ್ಥಳದಲ್ಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಾಥಮಿಕ ಚಿಕಿತ್ಸೆಯ ನಂತರ, ಗಾಯಗೊಂಡವರಲ್ಲಿ ಇಬ್ಬರನ್ನು ಹೆಚ್ಚಿನ ಮತ್ತು ವಿಶೇಷ ಚಿಕಿತ್ಸೆಗಾಗಿ ಸ್ಥಳೀಯ ವೈದ್ಯಕೀಯ ಕೇಂದ್ರದಿಂದ ಮತ್ತೊಂದು ವಿಶೇಷ ವೈದ್ಯಕೀಯ ಕೇಂದ್ರಕ್ಕೆ ವರ್ಗಾಯಿಸಲಾಯಿತು. ದುರಂತವೆಂದರೆ, ಈ ನಾಲ್ಕು ಸಂತ್ರಸ್ತರಲ್ಲೊಬ್ಬರಾದ ಭಾರತೀಯ ವಿದ್ಯಾರ್ಥಿನಿ ಸಹಜಾ ರೆಡ್ಡಿ ಉದುಮಲ ಅವರು, ತೀವ್ರವಾದ ಗಾಯಗಳಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದರು.

Exit mobile version