ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ಬಳಿ ಪಾಕಿಸ್ತಾನದ ಕುತಂತ್ರ ಮತ್ತೆ ಮುಂದುವರಿದಿದೆ. ಭಾನುವಾರ ರಾತ್ರಿ ನೌಶೇರಾ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಭಾರತೀಯ ವಾಯುಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಭಾರತೀಯ ಸೇನೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿ ಗುಂಡು ಹಾರಿಸುವ ಮೂಲಕ ಅವುಗಳನ್ನು ಹೊಡೆದುರುಳಿಸಿದೆ.
ಐದು ಬಾರಿ ಡ್ರೋನ್ ನುಸುಳುವಿಕೆ ಪ್ರಯತ್ನ:
ಭಾನುವಾರ ಒಂದೇ ದಿನ ಕನಿಷ್ಠ ಐದು ಬಾರಿ ಡ್ರೋನ್ ಹಾರಾಟದ ಪ್ರಯತ್ನಗಳು ವರದಿಯಾಗಿವೆ. ಸಂಜೆ 6:35 ರ ಸುಮಾರಿಗೆ ರಾಜೌರಿ ಜಿಲ್ಲೆಯಲ್ಲಿ ಮೊದಲು ಡ್ರೋನ್ ಕಾಣಿಸಿಕೊಂಡರೆ, ನಂತರ 7:15 ರ ಸುಮಾರಿಗೆ ಸಾಂಬಾ ಸೆಕ್ಟರ್‌ನ ರಾಮಗಢ ಪ್ರದೇಶದ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಅನುಮಾನಾಸ್ಪದ ವಸ್ತುವೊಂದು ಹಾರಾಡುತ್ತಿರುವುದು ಕಂಡುಬಂದಿದೆ. ಸೇನೆಯ ಮೆಷಿನ್ ಗನ್‌ಗಳು ಈ ಡ್ರೋನ್‌ಗಳನ್ನು ಗುರಿಪಡಿಸಿ ದಾಳಿ ನಡೆಸಿವೆ.
ಆಪರೇಷನ್ ಸಿಂಧೂರದ ನೆನಪು:
ಈ ಹಿಂದಿನ ‘ಆಪರೇಷನ್ ಸಿಂಧೂರ’ (Operation Sindoor) ಸಮಯದಲ್ಲಿ ಪಾಕಿಸ್ತಾನವು ಇದೇ ರೀತಿಯ ತಂತ್ರಜ್ಞಾನದ ಡ್ರೋನ್‌ಗಳನ್ನು ಬಳಸಿಕೊಂಡು ಭಾರತದ ಭದ್ರತೆಗೆ ಸವಾಲು ಹಾಕಿತ್ತು. ಆ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯು ಹತ್ತಾರು ಡ್ರೋನ್‌ಗಳನ್ನು ನಾಶಪಡಿಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತು. ಇದೀಗ ಮತ್ತೆ ಅದೇ ಮಾದರಿಯ ಡ್ರೋನ್‌ಗಳು ಕಾಣಿಸಿಕೊಂಡಿರುವುದು ಗಡಿಯಲ್ಲಿ ಆತಂಕಕ್ಕೆ ಕಾರಣವಾಗಿದೆ ಹೀಗಾಗಿ ಸೇನೆಯು ಹೈ ಅಲರ್ಟ್ ಘೋಷಿಸಿದೆ.
ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸಾಗಾಟ:
ಪಾಕಿಸ್ತಾನವು ಡ್ರೋನ್‌ಗಳ ಮೂಲಕ ಭಾರತದ ಭೂಪ್ರದೇಶದೊಳಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು (Drugs) ಸಾಗಿಸುವ ಸಂಚು ರೂಪಿಸುತಿತ್ತು. ಸಾಂಬಾ ಸೆಕ್ಟರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (PoK) ಬಂದ ಡ್ರೋನ್ ಒಂದು ಶಸ್ತ್ರಾಸ್ತ್ರಗಳ ಸರಕನ್ನು ಕೆಳಕ್ಕೆ ಬೀಳಿಸಿದೆ ಎಂದು ಸೇನಾ ಮೂಲಗಳು ದೃಢಪಡಿಸಿವೆ.
ಸೇನೆಯಿಂದ ಬೃಹತ್ ಶೋಧ ಕಾರ್ಯ:
ಡ್ರೋನ್‌ಗಳು ಎಲ್ಲಿಯಾದರೂ ಬಾಂಬ್ ಅಥವಾ ಮಾದಕ ವಸ್ತುಗಳನ್ನ ಎಸೆದಿವೆಯೇ ಎಂದು ಪತ್ತೆಹಚ್ಚಲು ನೌಶೇರಾ, ಸಾಂಬಾ ಮತ್ತು ರಾಜೌರಿ ಜಿಲ್ಲೆಗಳ ಗಡಿ ಭಾಗದಲ್ಲಿ ಭಾರತೀಯ ಸೇನೆಯು ಬೃಹತ್ ಶೋಧ ಕಾರ್ಯಾಚರಣೆ (Search Operation) ಆರಂಭಿಸಿದೆ. ಕಾಡು ಮತ್ತು ಹಳ್ಳಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಈ ಪದೇ ಪದೇ ಪ್ರಚೋದನಾಕಾರಿ ಕ್ರಮಗಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದ್ದು, ಗಡಿ ಭಾಗದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.





