ದೆಹಲಿ, (ಜೂನ್ 21): ಭಾರತ ಸರ್ಕಾರವು ಸುಧಾರಣಾ ಯೋಜನೆಗಳಿಗೆ ವೇಗ ನೀಡಲು, ಏರುತ್ತಿರುವ ಸಬ್ಸಿಡಿ ವೆಚ್ಚಗಳನ್ನು ನಿರ್ವಹಿಸಲು ಹಾಗೂ ನಗರಾಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಭಾರೀ ಮೊತ್ತದ ಸಾಲ ಪಡೆಯಲು ಮುಂದಾಗಿದೆ.
ವಿಶ್ವ ಬ್ಯಾಂಕ್‌ನಿಂದ $1.5 ಬಿಲಿಯನ್ ಹಾಗೂ ಎಡಿಬಿಯಿಂದ $1 ಬಿಲಿಯನ್ ಸಾಲ
ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಸಬ್ಸಿಡಿ ವೆಚ್ಚ ಹೆಚ್ಚಳ ಕಾರಣ
2047ರ ಅಭಿವೃದ್ಧಿ ಹೊಂದಿದ ಭಾರತ ಗುರಿಗೆ ಈ ಸಾಲ ನೆರವು
ವಿಶ್ವ ಬ್ಯಾಂಕ್ (World Bank) ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನಿಂದ ಒಟ್ಟು 2.5 ಬಿಲಿಯನ್ ಡಾಲರ್‌ಗಳ (ಸುಮಾರು ₹24,000 ಕೋಟಿ) ಸಾಲ ಪಡೆಯಲು ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ.
ಮಾಹಿತಿಯ ಪ್ರಕಾರ, ವಿಶ್ವ ಬ್ಯಾಂಕ್‌ನಿಂದ 1.5 ಬಿಲಿಯನ್ ಡಾಲರ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ 1 ಬಿಲಿಯನ್ ಡಾಲರ್ ಸಾಲ ದೊರೆಯುವ ನಿರೀಕ್ಷೆಯಿದೆ. ಮುಂದಿನ ಎರಡು ತಿಂಗಳೊಳಗೆ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ವಿಶ್ವ ಬ್ಯಾಂಕ್‌ನ ಕಾರ್ಯಕಾರಿ ಮಂಡಳಿಯು ಭಾರತದ ಸಾಲ ಪ್ರಸ್ತಾವನೆಗೆ ಈಗಾಗಲೇ ಅನುಮೋದನೆ ನೀಡಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಇರಾನ್ ಸಂಬಂಧಿತ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡುಬಂದಿದೆ. ಭಾರತ ತನ್ನ ಒಟ್ಟು ಕಚ್ಚಾ ತೈಲದ ಅಗತ್ಯದ ಶೇಕಡಾ 80 ಕ್ಕೂ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳುವುದರಿಂದ, ಇಂಧನ ಬೆಲೆ ಏರಿಕೆಯ ಪರಿಣಾಮವನ್ನು ಜನರ ಮೇಲೆ ಕಡಿಮೆ ಮಾಡಲು ಸರ್ಕಾರಕ್ಕೆ ಹೆಚ್ಚುವರಿ ಸಬ್ಸಿಡಿ ವೆಚ್ಚ ಭರಿಸಬೇಕಾಗಿದೆ.
ಇದರ ಜೊತೆಗೆ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಭಾರವೂ ಸರ್ಕಾರದ ವೆಚ್ಚವನ್ನು ಹೆಚ್ಚಿಸಿದೆ. ಪರಿಣಾಮವಾಗಿ ಬಜೆಟ್ ಮೇಲಿನ ಒತ್ತಡ ಹೆಚ್ಚಿದ್ದು, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಹಣಕಾಸಿನ ಕೊರತೆ ಎದುರಾಗಿದೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯುವ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ.
ಸಾಲದ ಮೊತ್ತವನ್ನು ಪ್ರಮುಖವಾಗಿ ನಗರ ಮೂಲಸೌಕರ್ಯ ಅಭಿವೃದ್ಧಿ, ಸ್ಮಾರ್ಟ್ ನಗರ ಯೋಜನೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಣೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಯೋಜನೆಗಳಿಗೆ ಬಳಸುವ ಉದ್ದೇಶವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದ್ದು, ಈ ಹಣ ಆ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬಲ ನೀಡಲಿದೆ.
ಭಾರತವು ಈಗಾಗಲೇ ವಿಶ್ವ ಬ್ಯಾಂಕ್‌ನ ಅತಿ ದೊಡ್ಡ ಸಾಲಗ್ರಾಹಕ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತವು ಸುಮಾರು 37 ಬಿಲಿಯನ್ ಡಾಲರ್ ಮೌಲ್ಯದ ಸಾಲವನ್ನು ವಿಶ್ವ ಬ್ಯಾಂಕ್‌ನಿಂದ ಪಡೆದಿದ್ದು, ಹೊಸದಾಗಿ ಕೇಳಲಾಗಿರುವ ಸಾಲವು ವಾರ್ಷಿಕ ಹಣಕಾಸು ಸಹಾಯ ಕಾರ್ಯಕ್ರಮದ ಭಾಗವಾಗಿದೆ ಎಂದು ವರದಿಗಳು ತಿಳಿಸಿವೆ. ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈ ಸಾಲ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.





