‘ಪಾಕಿಸ್ತಾನವೇ ಯುದ್ಧ ನಿಲ್ಲಿಸುವಂತೆ ಭಾರತವನ್ನು ಕೇಳಿಕೊಂಡಿತ್ತು’: ಪ್ರಧಾನಿ ಮೋದಿ ಮಾತು

Untitled design 2025 07 29t203939.231

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ, ವಿಶೇಷವಾಗಿ ಕಾಂಗ್ರೆಸ್‌ನ ಆರೋಪಗಳಿಗೆ ತೀಕ್ಷ್ಣವಾಗಿ ಉತ್ತರಿಸಿದರು. ‘ಆಪರೇಷನ್ ಸಿಂಧೂರ್’ ಕದನ ವಿರಾಮದ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನವೇ ಯುದ್ಧ ನಿಲ್ಲಿಸುವಂತೆ ಭಾರತವನ್ನು ಕೋರಿತು ಎಂದು ಸ್ಪಷ್ಟಪಡಿಸಿದರು. “ಮೇ 10ರ ರಾತ್ರಿ ಪಾಕಿಸ್ತಾನವೇ ನಮ್ಮನ್ನು ಸಂಪರ್ಕಿಸಿತ್ತು. ‘ಸಾಕು, ಇನ್ನು ಯುದ್ಧದ ಪೆಟ್ಟು ತಡೆಯಲಾಗದು, ದಯವಿಟ್ಟು ಯುದ್ಧ ನಿಲ್ಲಿಸಿ’ ಎಂದು ಗೋಗರೆದು ಕೇಳಿಕೊಂಡಿತ್ತು,” ಎಂದು ಮೋದಿ ಲೋಕಸಭೆಯಲ್ಲಿ ಹೇಳಿದರು.

ಪ್ರಧಾನಿ ಮೋದಿ ಕಾಂಗ್ರೆಸ್‌ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಗಡಿಯಲ್ಲಿ ಭಯೋತ್ಪಾದಕರ ‘ಗುರು’ಗಳು ಸತ್ತಾಗ, ಇಲ್ಲಿ ಕೆಲವರು ಅವರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಯಾವುದೇ ವಿಷಯದಲ್ಲಿ ಪ್ರತಿಭಟನೆಗೆ ನೆಪ ಸಿಗಬೇಕಷ್ಟೇ. ಅವರ ಹೇಳಿಕೆಗಳನ್ನು ದೇಶವೇ ನಗುವಿನ ದೃಷ್ಟಿಯಿಂದ ನೋಡುತ್ತಿದೆ,” ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ರಾಜಕೀಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಮೋದಿ, ಸೇನೆಯ ವಿಷಯದಲ್ಲಿ ಅವರ ವಿರೋಧಾತ್ಮಕ ನಿಲುವನ್ನು ಪ್ರಶ್ನಿಸಿದರು. “ಕಾಂಗ್ರೆಸ್ ಎಂದಿಗೂ ‘ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸಿಲ್ಲ. ಡೋಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ ವಿದೇಶಿ ರಾಯಭಾರಿಗಳ ಜೊತೆ ಗುಟ್ಟಾಗಿ ಸಭೆ ನಡೆಸಿದವರು ಯಾರು?” ಎಂದು ಅವರು ಕಾಂಗ್ರೆಸ್‌ನವರನ್ನು ನೇರವಾಗಿ ಕೇಳಿದರು.

ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ರಷ್ಯಾ, ಬ್ರೆಜಿಲ್, ಬ್ರಿಕ್ಸ್, ಮತ್ತು ಕ್ವಾಡ್ ಸಂಘಟನೆಗಳು ಭಾರತಕ್ಕೆ ಬೆಂಬಲ ನೀಡಿದವು. ಆದರೆ, ಕಾಂಗ್ರೆಸ್ ಮಾತ್ರ ದೇಶದ ಜೊತೆ ನಿಲ್ಲಲಿಲ್ಲ ಎಂದು ಮೋದಿ ಆರೋಪಿಸಿದರು. “ಕಾಂಗ್ರೆಸ್ ಪದೇ ಪದೇ ಪಾಕಿಸ್ತಾನದ ಭಾಷೆಯಲ್ಲೇ ಮಾತನಾಡುತ್ತದೆ. ನಮ್ಮ ಸೇನೆಯ ಕಾರ್ಯಾಚರಣೆಗೆ ಪುರಾವೆ ಇರದಿದ್ದರೆ, ಕಾಂಗ್ರೆಸ್ ಇನ್ನೇನು ಮಾಡುತ್ತಿತ್ತು ಎಂದು ದೇಶವೇ ಯೋಚಿಸಬೇಕು,” ಎಂದು ಅವರು ತರಾಟೆಗೆ ತೆಗೆದುಕೊಂಡರು.

ಪಾಕಿಸ್ತಾನದೊಂದಿಗಿನ ಸಂಘರ್ಷದ ವೇಳೆ ಜಗತ್ತಿನ ಯಾವ ದೇಶವೂ ಭಾರತವನ್ನು ತಡೆಯಲಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು. “ಭಾರತದ ಪ್ರತಿಕಾರದ ನಂತರ, 193 ರಾಷ್ಟ್ರಗಳಲ್ಲಿ ಕೇವಲ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಮಾತನಾಡಿದವು. ಆದರೆ, ದೇಶದ ವೀರ ಯೋಧರ ಶೌರ್ಯಕ್ಕೆ ಕಾಂಗ್ರೆಸ್‌ನಿಂದ ಬೆಂಬಲ ಸಿಗದಿರುವುದು ದುರದೃಷ್ಟಕರ,” ಎಂದು ಅವರು ಹೇಳಿದರು. ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಹತ್ಯೆಯಲ್ಲೂ ಕಾಂಗ್ರೆಸ್ ರಾಜಕೀಯವನ್ನು ಕಂಡುಕೊಂಡಿತ್ತು ಎಂದು ಮೋದಿ ಆಕ್ಷೇಪಿಸಿದರು.

ಕಾಂಗ್ರೆಸ್‌ನ ಈ ವರ್ತನೆಯಿಂದ ದೇಶದ ಜನತೆಗೆ ಅವರ ರಾಷ್ಟ್ರೀಯತೆಯ ಕುರಿತು ಪ್ರಶ್ನೆಗಳು ಎದ್ದಿವೆ. ಭಾರತದ ಸೇನೆಯ ಶಕ್ತಿಯನ್ನು ಮತ್ತು ವಿಶ್ವದ ಬೆಂಬಲವನ್ನು ಮೋದಿ ಹೇಳಿದರು. “ಭಾರತವು ತನ್ನ ಶತ್ರುಗಳಿಗೆ ಯಾವಾಗಲೂ ತಕ್ಕ ಉತ್ತರ ನೀಡುತ್ತದೆ. ಆದರೆ, ದೇಶದೊಳಗಿನ ಕೆಲವು ಶಕ್ತಿಗಳು ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ,” ಎಂದು ಅವರು ಕಾಂಗ್ರೆಸ್‌ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Exit mobile version