ಆಂಧ್ರ ಆಹಾರವೂ ಖಾರ, ಈಗ ಹೂಡಿಕೆಯೂ ಖಾರವಾಗಿದೆ: ನಾಲಿಗೆ ಹರಿಬಿಟ್ಟ ಐಟಿ ಸಚಿವ ನರ ಲೋಕೇಶ್

Untitled design 2025 10 16t135121.686

ಹೈದರಾಬಾದ್‌, ಅಕ್ಟೋಬರ್ 16: ಹೂಡಿಕೆದಾರರನ್ನು ಆಕರ್ಷಿಸುವ ಸ್ಪರ್ಧೆಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ನಡುವೆ ವಾಕ್ಚಾತುರ್ಯದ ಯುದ್ಧ ಆರಂಭವಾಗಿದೆ. ಗೂಗಲ್ ಸಂಸ್ಥೆ ತನ್ನ ದೈತ್ಯಾಕಾರದ 15 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಂಧ್ರಪ್ರದೇಶದಲ್ಲಿ ಮಾಡಲಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಐಟಿ ಸಚಿವ ನರ ಲೋಕೇಶ್ ಅವರು ಕರ್ನಾಟಕದ ಕಡೆಗೆ ಪರೋಕ್ಷವಾಗಿ ವ್ಯಂಗ್ಯಭರಿತ ಹೇಳಿ ನೀಡಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಲೋಕೇಶ್ ಅವರು ತಮ್ಮ ಪೋಸ್ಟ್‌ನಲ್ಲಿ, “ಆಂಧ್ರದ ಊಟ ಖಾರವಾಗಿರುತ್ತದೆ ಎನ್ನುತ್ತಾರೆ. ಈಗ ನಮ್ಮ ಹೂಡಿಕೆಗಳೂ ಖಾರವಾಗಿವೆ ಎನ್ನಬಹುದು. ಕೆಲವು ನೆರೆ ರಾಜ್ಯಗಳಿಗೆ ಈ ಉರಿ ತಾಳಲಾಗುತ್ತಿಲ್ಲ” ಎಂದು ಬರೆದಿದ್ದಾರೆ. ನೇರವಾಗಿ ಯಾವುದೇ ರಾಜ್ಯದ ಹೆಸರು ಉಲ್ಲೇಖಿಸದಿದ್ದರೂ, ಈ ಹೇಳಿಕೆ ಕರ್ನಾಟಕ ಮತ್ತು ತೆಲಂಗಾಣವನ್ನು ಗುರಿಯಾಗಿಸಿಕೊಂಡಂತಾಗಿದೆ.

ಹೆಸರು ನೇರವಾಗಿ ಹೇಳದಿದ್ದರೂ, ಈ ಹೇಳಿಕೆಯ ಕಿಡಿ ಕರ್ನಾಟಕ ಹಾಗೂ ತೆಲಂಗಾಣದತ್ತ ತಿರುಗಿದೆ. ಏಕೆಂದರೆ ಇತ್ತೀಚೆಗಷ್ಟೇ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಂಧ್ರದ ಹೂಡಿಕೆ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಗೂಗಲ್ ಹೂಡಿಕೆ 

ಗೂಗಲ್ ಸಂಸ್ಥೆ ವೈಜಾಗ್‌ನಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಪ್ರಕಟಿಸಿದೆ. ಈ ಯೋಜನೆಯಡಿ ಡೇಟಾ ಸೆಂಟರ್, ಎಐ ಹಬ್, ಹಾಗೂ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ನಿರ್ಮಾಣವಾಗಲಿದೆ. ಈ ಯೋಜನೆಗಾಗಿ ಆಂಧ್ರ ಸರ್ಕಾರ ಸಬ್ಸಿಡಿ ದರದಲ್ಲಿ ಭೂಮಿ, ವಿದ್ಯುತ್ ಮತ್ತು ನೀರಿನ ಸೌಲಭ್ಯ ಒದಗಿಸಲು ಭರವಸೆ ನೀಡಿದೆ.

ನರ ಲೋಕೇಶ್ ಅವರು ಹೇಳುವಂತೆ, “ಗೂಗಲ್ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅನೇಕ ರಾಜ್ಯಗಳು ತಮ್ಮ ರಾಜ್ಯಕ್ಕೆ ಬರಲು ಕಂಪನಿಗೆ ಆಹ್ವಾನ ನೀಡಿದ್ದವು. ಆದರೆ ನಾವು ತಯಾರಿ ಮಾಡಿಕೊಂಡಿದ್ದೆವು, ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ್ದೆವು. ಅದಕ್ಕಾಗಿಯೇ ಆಂಧ್ರ ಆಯ್ಕೆಯಾಯಿತು,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

“ಬೆಂಗಳೂರಿಗೆ ಬೇರೆಯವರಿಗಿಂತ ಸಾಟಿಯೇ ಇಲ್ಲ”: ಡಿ.ಕೆ. ಶಿವಕುಮಾರ್ ತಿರುಗೇಟು

ಆದರೆ ಆಂಧ್ರ ಸಚಿವರ ಈ ವ್ಯಂಗ್ಯಮಯ ಹೇಳಿಕೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಪ್ರತಿಕ್ರಿಯಿಸಿ, “ಬೆಂಗಳೂರು ನಗರಕ್ಕೆ ಪರ್ಯಾಯವೇ ಇಲ್ಲ. ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ ಮತ್ತು ಸಂಶೋಧನೆ ವಿಚಾರದಲ್ಲಿ ಭಾರತದಲ್ಲೇ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಬೇರೆಯವರು ತಮ್ಮ ರಾಜ್ಯವನ್ನು ಪ್ರಚಾರ ಮಾಡಲು ಬೆಂಗಳೂರಿನ ಹೆಸರನ್ನು ಬಳಸುತ್ತಾರೆ,” ಎಂದರು.

ಅವರು ಮುಂದುವರಿಸಿದರು, “ನಾರಾ ಲೋಕೇಶ್ ಆಗಲಿ ಅಥವಾ ಬೇರೆಯವರಾಗಲಿ, ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಹೇಳಿದರು.

Exit mobile version