ಪಾಕಿಸ್ತಾನಿ ನಾಗರಿಕರನ್ನು ಗುರುತಿಸಿ ದೇಶದಿಂದ ಹೊರಹಾಕಲು ಅಮಿತ್ ಶಾ ರಾಜ್ಯಗಳಿಗೆ ಸೂಚನೆ

11 2025 04 25t161836.424

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಹೀನಕೃತ್ಯದ ನಂತರ ಭಾರತ ಸರ್ಕಾರ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. 26 ಪ್ರವಾಸಿಗರ ಹತ್ಯೆಗೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಪಾತ್ರವಿದೆ ಎಂಬ ನಂಬಿಕೆಯೊಂದಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಎಲ್ಲ ರಾಜ್ಯಗಳಿಗೆ ಪಾಕಿಸ್ತಾನ ಪ್ರಜೆಗಳ ಗುರುತಿಸಿ, ಅವರನ್ನು ದೇಶದಿಂದ ಹೊರಹಾಕುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ತಮ್ಮ ರಾಜ್ಯದೊಳಗಿನ ಪ್ರತಿಯೊಬ್ಬ ಪಾಕಿಸ್ತಾನ ಪ್ರಜೆಯನ್ನು ಪತ್ತೆಹಚ್ಚಿ, ದೇಶ ಬಿಟ್ಟು ಹೋಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕ್ರಮವನ್ನು 48 ಗಂಟೆಗಳೊಳಗೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜೊತೆಗೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೂ ಭಾರತ ತೀವ್ರ ಸಂದೇಶ ನೀಡಿದ್ದು, ಅವರು ಕೂಡ ತಕ್ಷಣ ದೇಶ ತೊರೆಯಬೇಕು ಎಂದು ಸೂಚಿಸಲಾಗಿದೆ.

ಭಾರತ ಸರ್ಕಾರ ಈ ಹಿನ್ನೆಲೆಯಲ್ಲಿ ಐದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಅಟ್ಟಾರಿ-ವಾಘಾ ಗಡಿಪಥದ ಭೂ ಸಾರಿಗೆ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೊತೆಗೆ, 1960ರಲ್ಲಿ ಸಹಿ ಮಾಡಲಾಗಿದ್ದ ಸಿಂಧೂ ನದಿಯ ನೀರಿನ ಹಂಚಿಕೆಯ ಒಪ್ಪಂದವನ್ನು ನಿರ್ಧಿಷ್ಟ ಕಾಲದವರೆಗೆ ಅಮಾನತುಗೊಳಿಸಲಾಗಿದೆ. ಪಾಕಿಸ್ತಾನ ಪ್ರಜೆಗಳಿಗೆ ನೀಡಲಾಗುತ್ತಿದ್ದ ಸಾರ್ಕ್‌ ವಿಶೇಷ ವೀಸಾಗಳನ್ನು ರದ್ದುಪಡಿಸಲಾಗಿದ್ದು, ರಾಜತಾಂತ್ರಿಕ ಸಂಬಂಧಗಳನ್ನೂ ಹಿನ್ನಡೆಗೊಳಿಸಲಾಗಿದೆ.

ಈ ಕ್ರಮಗಳು ಏಪ್ರಿಲ್ 27ರಿಂದ ಜಾರಿಯಾಗಲಿದ್ದು, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಸಂಸ್ಥೆಗಳು ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರವು ಸೂಚಿಸಿದೆ. ವೈದ್ಯಕೀಯ ವೀಸಾವೂ ಯಾವುದೇ ವಿಧದ ಪಾಕಿಸ್ತಾನ ವೀಸಾ ಮಂಜೂರಾತಿಯನ್ನೂ ಅಮಾನತುಗೊಳಿಸಲಾಗಿದೆ.

ಇನ್ನೊಂದೆಡೆ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪ್ರಸ್ತುತ 14 ಪಾಕಿಸ್ತಾನ ಮೂಲದ ನಾಗರಿಕರು ವಾಸವಿದ್ದು, ಅವರಲ್ಲಿ 10 ಮಂದಿ ಮಹಿಳೆಯರು ಹಾಗೂ ಮೂವರು ಮಕ್ಕಳು. ಈ ಮಹಿಳೆಯರಲ್ಲಿ ಹೆಚ್ಚಿನವರು ಭಟ್ಕಳದ ಸ್ಥಳೀಯರನ್ನು ವಿವಾಹವಾಗಿರುವುದರಿಂದ, ಅವರಿಗೆ ದೀರ್ಘಕಾಲೀನ ವೀಸಾ ಹೊಂದಿದ ಕಾರಣ ಈ ಆದೇಶದಿಂದ ತಾತ್ಕಾಲಿಕವಾಗಿ ಮುಕ್ತರಾಗಿದ್ದಾರೆ. ಇವರು ಭಾರತದಲ್ಲೇ ವಾಸ ಮಾಡುವ ಕಾನೂನು ಅನುಮತಿ ಹೊಂದಿದ್ದಾರೆ.

ಇದಲ್ಲದೇ, ಮತ್ತೊಬ್ಬ ಪಾಕಿಸ್ತಾನ ಮೂಲದ ಮಹಿಳೆ ಬಾಂಗ್ಲಾದೇಶದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿ ಭಟ್ಕಳದಲ್ಲಿ ವಾಸವಾಗಿದ್ದಾಳೆ. ಅವರ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಭಟ್ಕಳ ಮತ್ತು ಪಾಕಿಸ್ತಾನ ನಡುವೆ ಇತಿಹಾಸದಲ್ಲೇ ಬಲವಾದ ವೈವಾಹಿಕ ಸಂಬಂಧಗಳಿವೆ. ಈ ಕಾರಣದಿಂದ ಹಲವರು ಪಾಕಿಸ್ತಾನದಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಾತ್ರ ನಾಲ್ವರು ಪಾಕಿಸ್ತಾನ ನಾಗರಿಕರು ಸಂದರ್ಶನ ವೀಸೆಯಲ್ಲಿ ಭಟ್ಕಳಕ್ಕೆ ಬಂದು ಹೋಗಿದ್ದಾರೆ. ಸದ್ಯಕ್ಕೆ ಪ್ರವಾಸಿ ವೀಸೆಯೊಂದಿಗೆ ಬಂದು ದೇಶದಲ್ಲಿ ಇರುವ ಪಾಕಿಸ್ತಾನ ಪ್ರಜೆಗಳು ಇಲ್ಲವೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version