ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೆನ್ನಲ್ಲೇ, ರಾಜ್ಯ ಸರ್ಕಾರ ಬೃಹತ್ ನೇಮಕಾತಿಗೆ ಚಾಲನೆ ನೀಡಿದೆ. ಒಟ್ಟು 32 ಇಲಾಖೆಗಳಲ್ಲಿ ಖಾಲಿ ಇರುವ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅಧಿಕೃತ ಮಂಜೂರಾತಿ ನೀಡಿದೆ.
ಹುದ್ದೆಗಳ ವರ್ಗೀಕರಣ ಮತ್ತು ವಿವರ
ಆರ್ಥಿಕ ಇಲಾಖೆಯು ನೀಡಿರುವ ಕ್ಲಿಯರೆನ್ಸ್ ಪ್ರಕಾರ, ಈ ನೇಮಕಾತಿಯು ವಿವಿಧ ಶ್ರೇಣಿಯ ಹುದ್ದೆಗಳನ್ನು ಒಳಗೊಂಡಿದೆ:
-
ಎ ದರ್ಜೆಯ ಹುದ್ದೆಗಳು: 542
-
ಬಿ ದರ್ಜೆಯ ಹುದ್ದೆಗಳು: 619
-
ಸಿ ದರ್ಜೆಯ (FDC ಸೇರಿದಂತೆ) ಹುದ್ದೆಗಳು: 23,139
ಒಟ್ಟು 2.64 ಲಕ್ಷಕ್ಕೂ ಅಧಿಕ ಹುದ್ದೆಗಳು ರಾಜ್ಯದಲ್ಲಿ ಖಾಲಿಯಿದ್ದು, ಮೊದಲ ಹಂತವಾಗಿ ಈ 24,300 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ವಯೋಮಿತಿ ಸಡಿಲಿಕೆ
ಕೇವಲ ಹುದ್ದೆಗಳ ಘೋಷಣೆ ಮಾತ್ರವಲ್ಲದೆ, ಅಭ್ಯರ್ಥಿಗಳಿಗೆ ವಯೋಮಿತಿಯಲ್ಲೂ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗಿದೆ. ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಈ ಸಡಿಲಿಕೆಯು 2027ರ ಡಿಸೆಂಬರ್ 31ರವರೆಗೆ ಹೊರಡಿಸಲಾಗುವ ಎಲ್ಲಾ ಅಧಿಕೃತ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಇದರಿಂದಾಗಿ ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ವಯೋಮಿತಿ ಮೀರಿದ ಆತಂಕದಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ಸಿಕ್ಕಂತಾಗಿದೆ.
ಧಾರವಾಡದ ಪ್ರತಿಭಟನೆ ಮತ್ತು ಅಭ್ಯರ್ಥಿಗಳ ಆತಂಕದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉದ್ಯೋಗಾಕಾಂಕ್ಷಿಗಳ ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರತಿ ಅರ್ಜಿಯ ಹಿಂದೆ ಒಂದು ಕುಟುಂಬದ ಕನಸಿರುತ್ತದೆ. ನಾವು ಅಧಿಕಾರಕ್ಕೆ ಬಂದಾಗ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದವು. ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ನಿರ್ಲಕ್ಷ್ಯದ ಫಲ ಎಂದು ಆರೋಪಿಸಿದ್ದಾರೆ.
ವಿರೋಧ ಪಕ್ಷಗಳು ವಿದ್ಯಾರ್ಥಿಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ ನಮ್ಮ ಸರ್ಕಾರ ಯುವಕರ ಭವಿಷ್ಯದ ಬಗ್ಗೆ ಬದ್ಧವಾಗಿದೆ. ಹಂತ ಹಂತವಾಗಿ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಕಂದಾಯ, ಶಿಕ್ಷಣ, ಪೊಲೀಸ್ ಹಾಗೂ ಇತರೆ ಪ್ರಮುಖ ಇಲಾಖೆಗಳಿಂದ ಅಧಿಕೃತ ಅಧಿಸೂಚನೆಗಳು ಹೊರಬೀಳುವ ನಿರೀಕ್ಷೆಯಿದೆ.
