ನವದೆಹಲಿ: ವಿಶ್ವದಾದ್ಯಂತ ಕೊರೋನಾ ವೈರಸ್ (ಕೋವಿಡ್-19) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಭಾರತದಲ್ಲಿ ಆತಂಕ ಮನೆಮಾಡಿದೆ. ಹಾಂಕಾಂಗ್, ಸಿಂಗಾಪುರ, ಚೀನಾದಂತಹ ದೇಶಗಳಲ್ಲಿ ಕೋವಿಡ್ ತೀವ್ರವಾಗಿ ಹರಡುತ್ತಿರುವಂತೆ, ಭಾರತದಲ್ಲೂ ಇದೀಗ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ 3,961 ಸಕ್ರೀಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ 4,000 ಗಡಿಯ ಸನಿಹಕ್ಕೆ ತಲುಪಿರುವ ಈ ಸಂಖ್ಯೆ ಆತಂಕವನ್ನು ಹೆಚ್ಚಿಸಿದೆ. ಈ ನಡುವೆ, ಒಂದೇ ದಿನದಲ್ಲಿ ನಾಲ್ವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರಲ್ಲಿ 22 ವರ್ಷದ ಯುವತಿ ಮತ್ತು 25 ವರ್ಷದ ಯುವಕನ ಸಾವನ್ನಪ್ಪಿದ್ದಾರೆ.
ಕೇರಳವು 1,435 ಪ್ರಕರಣಗಳೊಂದಿಗೆ ಅತೀ ಹೆಚ್ಚು ಕೋವಿಡ್ ಕೇಸ್‌ಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರ (506), ದೆಹಲಿ (483), ಪಶ್ಚಿಮ ಬಂಗಾಳ (331), ಮತ್ತು ಕರ್ನಾಟಕ (300) ನಂತರದ ಸ್ಥಾನಗಳಲ್ಲಿವೆ.
ಒಂದೇ ದಿನದಲ್ಲಿ ನಾಲ್ವರು ಬಲಿ
ಜೂನ್ 2 ರಂದು ದೆಹಲಿ, ತಮಿಳುನಾಡು, ಕೇರಳ, ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರಂತೆ ನಾಲ್ವರು ಕೋವಿಡ್‌ಗೆ ಬಲಿಯಾಗಿದ್ದಾರೆ. ದೆಹಲಿಯ 22 ವರ್ಷದ ಯುವತಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ನಡೆಯುತ್ತಿತ್ತು, ಆದರೆ ಕೋವಿಡ್ ಸೋಂಕಿನಿಂದ ಉಸಿರಾಟ ಸಮಸ್ಯೆ ತೀವ್ರಗೊಂಡು ಸಾವನ್ನಪ್ಪಿದ್ದಾರೆ. ತಮಿಳುನಾಡಿನ 25 ವರ್ಷದ ಯುವಕನಿಗೆ ಅಸ್ತಮಾ ಇದ್ದು, ಕೋವಿಡ್ ಸೋಂಕಿನಿಂದ ಉಸಿರಾಟ ತೊಂದರೆ ಉಲ್ಬಣಗೊಂಡು ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 300 ಗಡಿಯನ್ನು ದಾಟಿದೆ. ಕಳೆದ 24 ಗಂಟೆಗಳಲ್ಲಿ 87 ಹೊಸ ಕೇಸ್‌ಗಳು ದಾಖಲಾಗಿದ್ದು, 29 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 504 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇಕಡಾ 17.2ಕ್ಕೆ ಏರಿಕೆಯಾಗಿದೆ. ಭಾನುವಾರ ಈ ದರ ಶೇಕಡಾ 10 ಆಗಿತ್ತು. ಸದ್ಯ ರಾಜ್ಯದಲ್ಲಿ 311 ಸಕ್ರೀಯ ಕೇಸ್‌ಗಳಿದ್ದು, 296 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಮೂವರು ಐಸಿಯು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೆ ನಾಲ್ವರು ಸಾವು
ಕರ್ನಾಟಕದಲ್ಲಿ ಈ ಕೋವಿಡ್ ಅಲೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ 60 ವರ್ಷ ಮೇಲ್ಪಟ್ಟವರು. ಮೇ 24 ರಂದು ಬೆಂಗಳೂರಿನ 84 ವರ್ಷದ ವ್ಯಕ್ತಿ, ಮೇ 29 ರಂದು ಬೆಳಗಾವಿಯ 70 ವರ್ಷದ ವ್ಯಕ್ತಿ, ಮತ್ತು ಮೇ 30 ರಂದು ಮೈಸೂರು ಮತ್ತು ಬೆಂಗಳೂರಿನ ತಲಾ 63 ವರ್ಷದ ಇಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ನಾಲ್ವರಲ್ಲಿ ಮೂವರು ವ್ಯಾಕ್ಸಿನ್ ಪಡೆದಿದ್ದರು.
