ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಎಲ್‌ಪಿಜಿ ಮೇಲಿನ ನಿರ್ಬಂಧ ತೆರವು

ಸಹಜ ಸ್ಥಿತಿಗೆ ಮರಳಿದ ಗ್ಯಾಸ್ ಪೂರೈಕೆ

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನಗೊಂಡು ಶಾಂತಿ ಸಂಧಾನದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ (LPG) ಪೂರೈಕೆಯ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಹೋಟೆಲ್‌, ರೆಸ್ಟೋರೆಂಟ್‌, ಕ್ಯಾಂಟೀನ್ ಹಾಗೂ ಆಹಾರ ಉದ್ಯಮಿಗಳಿಗೆ ದೊಡ್ಡ ಮಟ್ಟದ ರಿಲೀಫ್‌ ಸಿಕ್ಕಿದೆ.

ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಯುದ್ಧದ ಆತಂಕದ ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದ ಸಗಟು ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಮೊದಲು ಹಂತ ಹಂತವಾಗಿ ಆರಂಭಿಸಲಾಗಿತ್ತು. ಇದೀಗ ಪರಿಸ್ಥಿತಿ ಸಹಜವಾಗುತ್ತಿರುವ ಹಿನ್ನೆಲೆಯಲ್ಲಿ ಯುದ್ಧ ಪೂರ್ವದಂತೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಾಪಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದಿಂದ ಎಲ್‌ಪಿಜಿ ಸಾಗಣೆ ಮತ್ತು ಆಮದು ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಭಾರತಕ್ಕೆ ಅಗತ್ಯವಿರುವ ಎಲ್‌ಪಿಜಿಯ ಬಹುಪಾಲು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಆಮದಾಗುವುದರಿಂದ ದೇಶದಲ್ಲಿ ಪೂರೈಕೆ ಕೊರತೆಯ ಆತಂಕ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿತ್ತು. ಇದರಿಂದ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ ಹಾಗೂ ಆಹಾರ ಸಂಸ್ಕರಣಾ ಘಟಕಗಳು ಸಂಕಷ್ಟ ಎದುರಿಸಿದ್ದವು.

ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ತಗ್ಗಿದ ಪರಿಣಾಮ ಮಧ್ಯಪ್ರಾಚ್ಯದಿಂದ ಎಲ್‌ಪಿಜಿ ಸಾಗಣೆ ಮತ್ತೆ ಸುಗಮವಾಗಿದೆ. ದೇಶೀಯ ಉತ್ಪಾದನೆಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಪೂರೈಕೆಯ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಿದೆ.

ಇದರಿಂದ ಸಗಟು ಎಲ್‌ಪಿಜಿ ವಿತರಣೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ವ್ಯಾಪಾರ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗಲಿವೆ.

ಕಳೆದ ಕೆಲವು ವಾರಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೊಂದರೆ ಅನುಭವಿಸುತ್ತಿದ್ದವು. ಕೆಲವೆಡೆ ಅಡುಗೆ ಸಮಯದಲ್ಲಿ ವ್ಯತ್ಯಯ ಉಂಟಾಗಿದ್ದರೆ, ಕೆಲವು ಉದ್ಯಮಗಳು ಹೆಚ್ಚುವರಿ ವೆಚ್ಚದಲ್ಲಿ ಪರ್ಯಾಯ ಇಂಧನ ಬಳಸುವ ಪರಿಸ್ಥಿತಿ ಎದುರಿಸಬೇಕಾಗಿತ್ತು.

ಈಗ ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಹೋಟೆಲ್‌ ಉದ್ಯಮಿಗಳು ನಿಟ್ಟುಸಿರು ಬಿಟ್ಟಿದ್ದು, ಆಹಾರ ಉತ್ಪಾದನೆ ಮತ್ತು ಸೇವೆಗಳು ಮತ್ತೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.

ವಾಣಿಜ್ಯ ಎಲ್‌ಪಿಜಿ ಪೂರೈಕೆ ಸಾಮಾನ್ಯಗೊಂಡರೆ ಹೋಟೆಲ್‌ಗಳ ಕಾರ್ಯಾಚರಣೆ ಸುಗಮವಾಗಲಿದೆ. ಇದರಿಂದ ಆಹಾರ ಸೇವೆಗಳಲ್ಲಿ ವ್ಯತ್ಯಯ ಕಡಿಮೆಯಾಗುವ ಜೊತೆಗೆ, ಪೂರೈಕೆ ಸಮಸ್ಯೆಯಿಂದ ಉಂಟಾಗಿದ್ದ ಹೆಚ್ಚುವರಿ ವೆಚ್ಚವೂ ಇಳಿಕೆಯಾಗುವ ಸಾಧ್ಯತೆ ಇದೆ.

ಪೆಟ್ರೋಲಿಯಂ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಮಧ್ಯಪ್ರಾಚ್ಯದ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದೆ. ಸದ್ಯಕ್ಕೆ ಎಲ್‌ಪಿಜಿ ಪೂರೈಕೆ ಸ್ಥಿರವಾಗಿದ್ದು, ದೇಶದಲ್ಲಿ ಗೃಹ ಹಾಗೂ ವಾಣಿಜ್ಯ ಬಳಕೆದಾರರಿಗೆ ಅಗತ್ಯ ಪ್ರಮಾಣದಲ್ಲಿ ಅನಿಲ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಇನ್ನುಮುಂದೆ ಹೋಟೆಲ್‌ ಉದ್ಯಮಕ್ಕೆ ಯಾವುದೇ ರೀತಿಯ ಗ್ಯಾಸ್‌ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೋಟೆಲ್‌ ಮಾಲೀಕರಿ ನಿರಾಳರಾಗಿದ್ದಾರೆ.

Exit mobile version