ನವದೆಹಲಿ : ಪೆಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದು, ರಾಷ್ಟ್ರದ ಭದ್ರತೆಗೆ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದೊಂದಿಗಿನ ಎಲ್ಲಾ ಆಮದು ವಹಿವಾಟನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಈ ಕುರಿತು ಆದೇಶ ಹೊರಡಿಸಿದ್ದು, ಪಾಕಿಸ್ತಾನ ಮೂಲದ ಯಾವುದೇ ಉತ್ಪನ್ನಗಳನ್ನು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೆಹಲ್ಗಾಮ್ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿದ್ದು, ಈ ದಾಳಿಯ ಹಿಂದೆ ಪಾಕಿಸ್ತಾನದ ಉಗ್ರರು, ಕಾಶ್ಮೀರದ ಸ್ಥಳೀಯ ಉಗ್ರರು, ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐನ ಕೈವಾಡವಿರುವ ಸುಳಿವುಗಳು ದೊರೆತಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತವು ಫಾರಿನ್ ಟ್ರೇಡ್ ಪಾಲಿಸಿ 2023 (FTP) ಅಡಿಯಲ್ಲಿ ಈ ಕಠಿಣ ನಿರ್ಧಾರ ಕೈಗೊಂಡಿದೆ. ಡೈರೆಕ್ಟೋರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಹೊರಡಿಸಿರುವ ಅಧಿಸೂಚನೆಯಲ್ಲಿ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಧೋರಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಷೇಧವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರವು ಭಾರತದ ಭದ್ರತೆಗೆ ಸವಾಲು ಒಡ್ಡುತ್ತಿರುವುದರಿಂದ ಈ ಕ್ರಮ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಈ ಆದೇಶದ ಪ್ರಕಾರ, ಪಾಕಿಸ್ತಾನದಿಂದ ಯಾವುದೇ ವಸ್ತುಗಳ ಆಮದಿಗೆ ಅವಕಾಶವಿಲ್ಲ. ಒಂದು ವೇಳೆ ಈ ನಿಷೇಧದಲ್ಲಿ ಯಾವುದೇ ಬದಲಾವಣೆ ಅಗತ್ಯವಿದ್ದರೆ, ಭಾರತ ಸರ್ಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಈ ಕ್ರಮದಿಂದ ಭಾರತ-ಪಾಕಿಸ್ತಾನದ ನಡುವಿನ ವ್ಯಾಪಾರ ಸಂಬಂಧವು ಸಂಪೂರ್ಣವಾಗಿ ಕುಸಿದಿದೆ. ಈಗಾಗಲೇ ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚಲಾಗಿದ್ದು, ಈಗ ಇತರ ಯಾವುದೇ ಮಾರ್ಗದ ಮೂಲಕವೂ ಪಾಕಿಸ್ತಾನದೊಂದಿಗೆ ವ್ಯಾಪಾರ ನಡೆಸುವುದನ್ನು ನಿಷೇಧಿಸಲಾಗಿದೆ.
ಪಾಕಿಸ್ತಾನದ ಈಗಿನ ಆರ್ಥಿಕ ಸ್ಥಿತಿಯು ಈಗಾಗಲೇ ದುರ್ಬಲವಾಗಿದೆ. ಭಾರತದ ಈ ಕ್ರಮವು ಪಾಕಿಸ್ತಾನಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ತಂದೊಡ್ಡಲಿದೆ. ಇದರ ಜೊತೆಗೆ, ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಲು ಮನವಿ ಮಾಡಿದ್ದು, ಪಾಕಿಸ್ತಾನಕ್ಕೆ ಹರಿದು ಬರುವ ಆರ್ಥಿಕ ಸಹಾಯವನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿದೆ. ಈ ಕ್ರಮಗಳಿಂದ ಪಾಕಿಸ್ತಾನದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದ್ದು, ಅದರ ಮಿಲಿಟರಿ ಯೋಜನೆಗಳು ಕೂಡ ಸಂಕಷ್ಟಕ್ಕೆ ಸಿಲುಕಲಿವೆ.
ಪೆಹಲ್ಗಾಮ್ ದಾಳಿಯ ಬಳಿಕ ಭಾರತದ ಕಠಿಣ ನಿಲುವನ್ನು ಕಂಡು ಬೆಚ್ಚಿಬಿದ್ದಿರುವ ಪಾಕಿಸ್ತಾನ, ತನ್ನ ನ್ಯೂಕ್ಲಿಯರ್ ಅಸ್ತ್ರಗಳ ಬಗ್ಗೆ ಬೆದರಿಕೆ ಹಾಕುತ್ತಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ಮುಂದೆ ಈ ವಿಷಯವನ್ನು ಎತ್ತಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ಆದರೆ, ಭಾರತ ಈ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ತನ್ನ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿ ಮುಂದುವರಿಯುತ್ತಿದೆ. ಭಾರತೀಯ ಸೇನೆಯು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.