ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತೀವ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸುತ್ತಿದೆ. ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕರ್ತವ್ಯ ಪಥದಲ್ಲಿ ನಡೆಯಲಿರುವ ಈ ಭವ್ಯ ಸಮಾರಂಭವು ಭಾರತದ ಬೆಳೆಯುತ್ತಿರುವ ಸೈನಿಕ ಸಾಮರ್ಥ್ಯ ಮತ್ತು ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರಲಿದೆ.
ಗಣ್ಯರ ಉಪಸ್ಥಿತಿ ಮತ್ತು ಮುಖ್ಯ ಅತಿಥಿಗಳು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಯೆಂದರೆ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಇದು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಲವಾದ ರಾಜತಾಂತ್ರಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ.
ಪ್ರಧಾನಿ ಮೋದಿಯವರ ಸಂದೇಶ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರುತ್ತಾ, ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ಭವ್ಯ ರಾಷ್ಟ್ರೀಯ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಹಾರೈಸಿದ್ದಾರೆ.
ಇಂದು ಬೆಳಿಗ್ಗೆ 10:30ಕ್ಕೆ ಅಧಿಕೃತವಾಗಿ ಕಾರ್ಯಕ್ರಮಗಳು ಆರಂಭವಾಗಲಿವೆ. ಅದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial) ಭೇಟಿ ನೀಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಸೈನಿಕರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಿದ್ದಾರೆ.
21 ಕುಶಾಲತೋಪುಗಳ ಗೌರವ ಮತ್ತು ಪರೇಡ್ ವಿಶೇಷತೆ
ಸಂಪ್ರದಾಯದಂತೆ ರಾಷ್ಟ್ರಧ್ವಜಾರೋಹಣದ ನಂತರ ರಾಷ್ಟ್ರಗೀತೆಯನ್ನು ಹಾಡಲಾಗುವುದು. ಈ ವೇಳೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿ 21 ಕುಶಾಲತೋಪುಗಳ (21-gun salute) ಗೌರವ ಸಮರ್ಪಿಸಲಾಗುತ್ತದೆ. ಈ ಗೌರವವನ್ನು 172 ಫೀಲ್ಡ್ ರೆಜಿಮೆಂಟ್‌ನ 1721 ಸೆರಿಮೋನಿಯಲ್ ಬ್ಯಾಟರಿ ತಂಡವು ನಿರ್ವಹಿಸಲಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ಈ ಫಿರಂಗಿಗಳು ಭಾರತದ ಆತ್ಮನಿರ್ಭರತೆಯನ್ನು ಪ್ರದರ್ಶಿಸಲಿವೆ.
ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು, ಸೈನ್ಯದ ವಿವಿಧ ದಳಗಳ ಪಥಸಂಚಲನ ಮತ್ತು ವಾಯುಪಡೆಯ ಸಾಹಸಮಯ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿವೆ. ಇನ್ನೇನು ಕೆಲವೇ ಸಮಯದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು ಇದನ್ನ ವೀಕ್ಷಿಸಲು ಈಗಾಗಲೇ ಸ್ಥಳದಲ್ಲಿ ಗಣನೀಯ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.





