ಮುಂಬೈ (ಫೆ.4): ಮುಂಬೈನಲ್ಲಿ ನಡೆದ ಭಯಾನಕ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗೋರೆಗಾಂವ್ (ಪಶ್ಚಿಮ) ಪ್ರದೇಶದಲ್ಲಿರುವ ಅನ್ಮೋಲ್ ಟವರ್ ಕಟ್ಟಡದ ಲಿಫ್ಟ್‌ನಲ್ಲಿ ಹೈಡ್ರೋಜನ್ ಅನಿಲ ತುಂಬಿದ ಬಲೂನ್‌ಗಳು ಏಕಾಏಕಿ ಸ್ಫೋಟಗೊಂಡಿದ್ದು, ಮೂವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಈ ಶಾಕಿಂಗ್ ಘಟನೆ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ದುರ್ಘಟನೆ ಫೆಬ್ರವರಿ 2 ರಂದು ಅನ್ಮೋಲ್ ಟವರ್ ಕಟ್ಟಡದಲ್ಲಿ ನಡೆದಿದೆ. ಕಟ್ಟಡದ ಒಂದು ಮಹಡಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಅದಕ್ಕಾಗಿ ಡೆಕೋರೇಷನ್ ಕೆಲಸ ಭರದಿಂದ ನಡೆಯುತ್ತಿತ್ತು. ಈ ಸಂದರ್ಭ ಹೈಡ್ರೋಜನ್ ಅನಿಲದಿಂದ ತುಂಬಿದ ಹಲವಾರು ಬಲೂನ್‌ಗಳನ್ನು ಹೊತ್ತುಕೊಂಡು ಒಬ್ಬ ಯುವಕ ಲಿಫ್ಟ್ ಮೂಲಕ ಮೇಲಕ್ಕೆ ಹೋಗಲು ಪ್ರಯತ್ನಿಸಿದ್ದಾನೆ.
ಅದೇ ಸಮಯದಲ್ಲಿ ಲಿಫ್ಟ್‌ನಲ್ಲಿ ಇನ್ನಿಬ್ಬರು ಯುವಕರು ಹಾಗೂ ಒಬ್ಬ ಯುವತಿ ಇದ್ದರು. ಲಿಫ್ಟ್ ಒಳಗೆ ಕಾಲಿಟ್ಟ ಕೆಲವೇ ಸೆಕೆಂಡುಗಳಲ್ಲಿ, ಯುವಕನ ಕೈಯಲ್ಲಿದ್ದ ಬಲೂನ್‌ಗಳು ಏಕಾಏಕಿ ಸ್ಫೋಟಗೊಂಡು ಭಾರೀ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ತೀವ್ರತೆಗೆ ಲಿಫ್ಟ್ ಸಂಪೂರ್ಣವಾಗಿ ಬೆಂಕಿಯಿಂದ ಆವರಿಸಿತ್ತು.
ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸುವಂತೆ, ಸ್ಫೋಟದ ನಂತರ ಲಿಫ್ಟ್‌ನೊಳಗಿನವರು ಗಾಬರಿಗೊಂಡು ಹೊರಗೆ ಓಡಿ ಬರುವುದು ಕಂಡುಬರುತ್ತದೆ. ಅದೃಷ್ಟವಶಾತ್ ಲಿಫ್ಟ್‌ನ ಬಾಗಿಲು ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಇದರಿಂದಾಗಿ ಮೂವರು ಕೂಡಲೇ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಸ್ಫೋಟದ ವೇಳೆ ಉಂಟಾದ ಬೆಂಕಿಯಿಂದ ಮೂವರಿಗೂ ಸುಟ್ಟ ಗಾಯಗಳಾಗಿವೆ.
ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
मुंबई के गोरेगांव में लिफ्ट के भीतर गैस वाले गुब्बारों में विस्फोट हुआ.इस घटना में एक युवक और युवती घायल हो गए, CCTV फुटेज में हादसा कैद#mumbai #balloonblast #GasBalloons pic.twitter.com/Zm3BQqSttI
— Ravi Dalmia (@RaviDalmia13) February 4, 2026
ಹೈಡ್ರೋಜನ್ ಬಲೂನ್‌ಗಳು ಸ್ಫೋಟಗೊಳ್ಳಲು ಕಾರಣವೇನು?
ತಜ್ಞರ ಪ್ರಕಾರ, ಹೈಡ್ರೋಜನ್ ಅನಿಲ ಅತ್ಯಂತ ದಹನಕಾರಿ ಅನಿಲವಾಗಿದೆ. ಇದು ಗಾಳಿಯಲ್ಲಿ ಇರುವ ಆಮ್ಲಜನಕದೊಂದಿಗೆ ಅತೀ ಸುಲಭವಾಗಿ ಬೆರೆತು ಸ್ಫೋಟಕ ಮಿಶ್ರಣವನ್ನು ರೂಪಿಸುತ್ತದೆ. ಹೈಡ್ರೋಜನ್ ಉರಿಯಲು ಬಹಳ ಕಡಿಮೆ ಶಕ್ತಿಯೇ ಸಾಕಾಗುತ್ತದೆ. ಲಿಫ್ಟ್‌ನೊಳಗಿನ ಸಣ್ಣ ಕಿಡಿ, ವಿದ್ಯುತ್ ಸ್ಪಾರ್ಕ್ ಅಥವಾ ಸ್ಥಿರ ವಿದ್ಯುತ್ ಕೂಡ ಹೈಡ್ರೋಜನ್ ಅನ್ನು ಹೊತ್ತಿಸಲು ಕಾರಣವಾಗಬಹುದು.
