ಟೆಹ್ರಾನ್: ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ (Hormuz Strait) ಈಗ ಯುದ್ದದ ಕಾರ್ಮೋಡದಿಂದ ಕೂಡಿದೆ. ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗದಷ್ಟು ವಹಿವಾಟು ನಡೆಯುವ ಈ ಪ್ರಮುಖ ಜಲಮಾರ್ಗವನ್ನು ಇರಾನ್ ಬಂದ್ ಮಾಡಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಇರಾನ್‌ನ ಈ ಉದ್ಧಟತನದ ವಿರುದ್ಧ ಈಗ ಅಮೆರಿಕ, ಯುಎಇ, ಬಹ್ರೇನ್ ಸೇರಿದಂತೆ ಒಟ್ಟು 22 ರಾಷ್ಟ್ರಗಳು ಒಂದಾಗಿವೆ.
ಜಂಟಿ ಹೇಳಿಕೆ ಮತ್ತು ಖಂಡನೆ
ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ನಡೆಸುತ್ತಿರುವ ಸರಣಿ ದಾಳಿಗಳನ್ನು ತೀವ್ರವಾಗಿ ಖಂಡಿಸಿರುವ 22 ರಾಷ್ಟ್ರಗಳ ಒಕ್ಕೂಟವು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಕಳೆದ 22 ದಿನಗಳಿಂದ ಸಂಘರ್ಷ ತಾರಕಕ್ಕೇರಿದ್ದು, ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಯು ಅಂತರಾಷ್ಟ್ರೀಯ ಸಮುದ್ರಯಾನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಈ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆಗೆ ಬೆಂಬಲ ನೀಡಿದೆ.
ಈ ಬಿಕ್ಕಟ್ಟು ತೀವ್ರಗೊಳ್ಳಲು ಫೆಬ್ರವರಿ 28ರಂದು ನಡೆದ ಘಟನೆ ಪ್ರಮುಖ ಕಾರಣವಾಗಿದೆ. ಅಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಇದರ ಪ್ರತೀಕಾರವಾಗಿ ಕೆರಳಿದ ಇರಾನ್, ತನ್ನ ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ಮತ್ತು ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಲಾರಂಭಿಸಿತು. ಅಷ್ಟೇ ಅಲ್ಲದೆ, ಪ್ರಮುಖ ತೈಲ ಮತ್ತು ಅನಿಲ ಸ್ಥಾಪನೆಗಳನ್ನೇ ಗುರಿಯಾಗಿಸಿಕೊಂಡು ನಾಗರಿಕ ಮೂಲಸೌಕರ್ಯಗಳಿಗೆ ಹಾನಿ ಉಂಟು ಮಾಡುತ್ತಿದೆ.
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯ ನಡುವಿನ ಕಿರಿದಾದ ಮಾರ್ಗವಾಗಿದೆ. ಸೌದಿ ಅರೇಬಿಯಾ, ಇರಾನ್, ಯುಎಇ ಮತ್ತು ಕುವೈತ್‌ನಂತಹ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳ ಹಡಗುಗಳು ಇದೇ ಮಾರ್ಗವಾಗಿ ಜಗತ್ತಿಗೆ ತೈಲ ತಲುಪಿಸಬೇಕು. ಒಂದು ವೇಳೆ ಇರಾನ್ ಈ ಮಾರ್ಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ, ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಲಿವೆ. ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಭಾರಿ ಆರ್ಥಿಕ ಹೊರೆ ಉಂಟು ಮಾಡಲಿದೆ.
ಜಲಸಂಧಿಯಲ್ಲಿ ಶಾಂತಿ ಕಾಪಾಡಲು ಮತ್ತು ಹಡಗುಗಳಿಗೆ ರಕ್ಷಣೆ ನೀಡಲು ಅಂತರಾಷ್ಟ್ರೀಯ ನೌಕಾಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ. ನಾಗರಿಕ ಹಡಗುಗಳ ಮೇಲೆ ದಾಳಿ ಮಾಡುವುದು ಇಡೀ ವಿಶ್ವದ ಆರ್ಥಿಕತೆಯ ಮೇಲೆ ಮಾಡಿದ ದಾಳಿ ಎಂದು 22 ರಾಷ್ಟ್ರಗಳ ಒಕ್ಕೂಟವು ಅಭಿಪ್ರಾಯಪಟ್ಟಿದೆ.
