ಕೀವ್ ಆ.29: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 42 ಜನರು ಗಾಯಗೊಂಡಿದ್ದಾರೆ. ರಾತ್ರಿ ಪೂರ್ತಿ ನಡೆದ ದಾಳಿಯಿಂದಾಗಿ ರಾಜಧಾನಿಯಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಷ್ಯಾದ ದಾಳಿಯ ಪರಿಣಾಮ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಹಲವು ಮನೆಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ.
ದಾಳಿಗೊಳಗಾದ ಬುಚಾ ಜಿಲ್ಲೆ ಯ ಪ್ರದೇಶದಿಂದ 380ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ಟೈಮೂರ್ ಟ್ಕಾಚೆಂಕೊ ತಿಳಿಸಿದ್ದಾರೆ.
ಝೆಲೆನ್ಸ್ಕಿ ಆಕ್ರೋಶ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ರಷ್ಯಾದ ವಾಯುದಾಳಿಯಿಂದ ವಸತಿ ಕಟ್ಟಡಗಳು, ಗೋದಾಮುಗಳು ಹಾಗೂ ವೃದ್ಧರ ಆರೈಕೆ ಕೇಂದ್ರಗಳು ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಗಂಭೀರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಈ ದಾಳಿಗೆ ಕಾರಣರಾದವರು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಿತ್ತಲ್ ಕಂಪನಿಗೂ ಈ ಹಿಂದೆ ರಷ್ಯಾ ದಾಳಿ
ಇದಕ್ಕೂ ಮುನ್ನ ಆಗಸ್ಟ್ 17ರಂದು ಉಕ್ರೇನ್‌ನ ಕ್ರಿವಿ ರಿಹ್‌ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಆರ್ಸೆಲರ್ ಮಿತ್ತಲ್ ಗಣಿಗಾರಿಕೆ ಮತ್ತು ಲೋಹಶಾಸ್ತ್ರ ಸಂಕೀರ್ಣದ ಮೇಲೂ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು.
ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಕಾರ್ಮಿಕರು ಗಾಯಗೊಂಡಿದ್ದರು. ಕೋರ್ ಎನರ್ಜಿ ಹಾಗೂ ಬ್ಲಾಸ್ಟ್ ಫರ್ನೇಸ್‌ಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಘಟಕದ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿತ್ತು.
ಮೂರು ದಿನಗಳಿಂದ ನಿರಂತರ ದಾಳಿ
ಕಳೆದ ಮೂರು ದಿನಗಳಿಂದ ಕೀವ್ ನಿರಂತರ ವೈಮಾನಿಕ ದಾಳಿಗಳನ್ನು ಎದುರಿಸುತ್ತಿದೆ. ರಷ್ಯಾದ ದಾಳಿಗಳಿಂದ ನಾಗರಿಕ ಜೀವನ ಅಸ್ತವ್ಯಸ್ತವಾಗಿದ್ದು, ನಗರದಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಿದ್ದು, ರಕ್ಷಣಾ ಪಡೆಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುಂದುವರಿಸಿದ್ದಾರೆ.
