ಅಸ್ಸಾಂ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು 2014ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ತಮ್ಮ ರಾಜಕೀಯ ಜೀವನದ ಪ್ರಮುಖ ಘಟ್ಟವೊಂದನ್ನು ಸ್ಮರಿಸಿದ ಅವರು, 2014ರಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗುವ ಅವಕಾಶ ಬಹುತೇಕ ಖಚಿತವಾಗಿದ್ದರೂ, ಅಂತಿಮ ಕ್ಷಣದಲ್ಲಿ ಅದು ಕೈ ತಪ್ಪಿತು ಎಂದು ತಿಳಿಸಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ಅವರು 2014ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆ ಸಮಯದಲ್ಲಿ ರಾಜ್ಯ ಕಾಂಗ್ರೆಸ್‌ನ 58 ಶಾಸಕರು ತಮ್ಮನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ನಿಗದಿಪಡಿಸಲು ಕೇಳಿಕೊಂಡಿದ್ದರು ಎಂದು ಶರ್ಮಾ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಾ, 2014ರ ಜೂನ್ ತಿಂಗಳಲ್ಲಿ ಕಾಮಾಖ್ಯ ದೇವಸ್ಥಾನದಲ್ಲಿ ನಡೆಯುವ ಅಂಬುಬಾಚಿ ಮೇಳದ ನಂತರದ ದಿನವೇ ಪ್ರಮಾಣವಚನ ಸ್ವೀಕರಿಸುವುದಾಗಿ ಸೋನಿಯಾ ಗಾಂಧಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ. ಆದರೆ ಆ ವೇಳೆಯಲ್ಲಿ ಅಮೆರಿಕದಲ್ಲಿ ಇದ್ದ ರಾಹುಲ್ ಗಾಂಧಿ ಅವರು ಪಕ್ಷದ ಹಿರಿಯ ನಾಯಕರಿಗೆ ಕರೆ ಮಾಡಿದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿತು ಎಂದು ಶರ್ಮಾ ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರ ಕರೆ ನಂತರ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿದ ನಿರ್ಧಾರ ಮುಂದೂಡಲ್ಪಟ್ಟಿತು. ಅಂತಿಮವಾಗಿ ತಮಗೆ ಅವಕಾಶ ಸಿಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಆಗಿದ್ದವರು ತರುಣ್ ಗೊಗೊಯ್.. ಶರ್ಮಾ ಅವರು ಹೇಳುವಂತೆ, ಬಹುಮತ ಶಾಸಕರು ತಮ್ಮ ಪರ ಇದ್ದರೂ, ಕೆಲ ನಾಯಕರು ತಟಸ್ಥರಾಗಿದ್ದರು ಮತ್ತು ಕೇವಲ 12 ಶಾಸಕರು ಮಾತ್ರ ತರುಣ್ ಗೊಗೊಯ್ ಮುಂದುವರಿಯಬೇಕು ಎಂದು ಬಯಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂಗೆ ಭೇಟಿ ನೀಡಿದಾಗಲೂ ಶಾಸಕರ ಬೆಂಬಲ ತಮ್ಮ ಪರವಾಗಿಯೇ ಇದೆ ಎಂಬುದು ಸ್ಪಷ್ಟವಾಗಿತ್ತು ಎಂದು ಶರ್ಮಾ ತಿಳಿಸಿದ್ದಾರೆ.
ಆದರೆ ಪಕ್ಷದ ಒಳರಾಜಕೀಯ ಮತ್ತು ನಾಯಕತ್ವದ ಮಟ್ಟದಲ್ಲಿ ನಡೆದ ಬದಲಾವಣೆಗಳಿಂದಾಗಿ ತಮ್ಮ ಮುಖ್ಯಮಂತ್ರಿಪದದ ಕನಸು ನನಾಸಾಗಲಿಲ್ಲ ಎಂದು ಅವರು ಹೇಳಿದ್ದಾರೆ. “ಆ ಸಮಯದಲ್ಲಿ ನನಗೆ ನ್ಯಾಯ ಸಿಗಲಿಲ್ಲ. ಆದರೆ ಬಹುಶಃ ನಾನು ಆಗ ಮುಖ್ಯಮಂತ್ರಿಯಾಗಿದ್ದರೆ ನನ್ನ ಇಮೇಜ್ ಹಾಳಾಗುತ್ತಿತ್ತೇನೋ” ಎಂದು ಶರ್ಮಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
2014ರ ನಂತರ ಹಿಮಂತ್ ಬಿಸ್ವಾ ಶರ್ಮಾ ಅವರು ತರುಣ್ ಗೊಗೊಯ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು. ಬಳಿಕ 2015ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಸೇರ್ಪಡೆಯ ನಂತರ ಅವರ ರಾಜಕೀಯ ಪಯಣ ವೇಗ ಪಡೆದುಕೊಂಡಿತು. ಕೊನೆಗೆ 2021ರಲ್ಲಿ ಅವರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಬಿಜೆಪಿಯಿಂದ ಮುಖ್ಯಮಂತ್ರಿಯಾಗಿರುವುದರಿಂದ ಅಸ್ಸಾಂ ಮತ್ತು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. “ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಧನ್ಯವಾದ ಹೇಳಬೇಕು,” ಎಂದು ಅವರು ಹಾಸ್ಯಭರಿತವಾಗಿ ಹೇಳಿದ್ದಾರೆ.
