ಉದಯನಿಧಿ ಸ್ಟಾಲಿನ್‌ರನ್ನು ಇಂದೇ ಬಿಡುಗಡೆ ಮಾಡಿ: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

Untitled design 2026 08 04T154726.943

ಚೆನ್ನೈ: ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ. ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾ ಸಭೆಯಲ್ಲಿ ನೀಡಿದ ಹೇಳಿಕೆಯ ಹಿನ್ನೆಲೆ ಉದಯನಿಧಿ ಅವರನ್ನು ತಂಜಾವೂರು ಪೊಲೀಸರು ಬಂಧಿಸಿದ್ದರು.

ವಿವಾದದ ಹಿನ್ನೆಲೆ

ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು. “ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಎಂಬುದು ಅಷ್ಟೇ” ಎಂದು ಹೇಳಿದ್ದರು.

ಈ ವೇಳೆ ಜನಸಮೂಹದಿಂದ ‘ತ್ರಿಷಾ… ತ್ರಿಷಾ…’ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ನಗುಮುಖದೊಂದಿಗೆ “ಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕು” ಎಂದು ಹೇಳಿದರು. ಈ ಹೇಳಿಕೆಯು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿವೆ.

ನ್ಯಾಯಾಲಯದ ಮಧ್ಯಸ್ಥಿಕೆ

ಮದ್ರಾಸ್ ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು, “ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ, ತಂಜಾವೂರಿಗೆ ಕರೆದೊಯ್ದಿದ್ದಾರೆ. ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಬಯಸುತ್ತಿಲ್ಲ. ಕೇವಲ ವಿಚಾರಣೆ ನಡೆಸಿದ ನಂತರ ಅವರನ್ನು ಮಂಗಳವಾರವೇ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದೆ” ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ ಪ್ರಕಾರ, ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಉದ್ದೇಶ ಹೊಂದಿಲ್ಲ. ಕೇವಲ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಉದಯನಿಧಿ ಸ್ಟಾಲಿನ್ ಅವರ ಈ ಹೇಳಿಕೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿತ್ತು. ವಿವಿಧ ರಾಜಕೀಯ ಪಕ್ಷಗಳು ಈ ಹೇಳಿಕೆಯನ್ನು ಮಹಿಳಾ ದ್ವೇಷ ಮತ್ತು ಅಶ್ಲೀಲತೆ ಎಂದು ಟೀಕಿಸಿದ್ದವು. ಡಿಎಂಕೆ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.

Exit mobile version