ತೆಲಂಗಾಣ, ಆಂಧ್ರದಲ್ಲಿ ರಣಬಿಸಿಲು: ಹೀಟ್ ಸ್ಟ್ರೋಕ್‌ಗೆ 51 ಜನರು ಬಲಿ

Untitled design 2026 05 24T161007.795

ಹೈದರಾಬಾದ್: ಒಂದೆಡೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಅವಘಡಗಳು ಸಂಭವಿಸುತ್ತಿದ್ದರೆ, ಮತ್ತೊಂದೆಡೆ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಣಬಿಸಿಲಿನ ವಾತಾವರಣ ಕಂಡುಬರುತ್ತಿದೆ. ತೆಲಂಗಾಣದಲ್ಲಿ ಹೀಟ್ ಸ್ಟ್ರೋಕ್ (ಬಿಸಿಲಾಘಾತ) ದಿಂದ ಸಾವನ್ನಪ್ಪಿದವರ ಸಂಖ್ಯೆ 51 ಕ್ಕೆ ಏರಿದೆ. ಜತೆಗೆ ಆಂಧ್ರದಲ್ಲಿ ಒಂದೇ ದಿನ 16 ಜನರು ಬಲಿಯಾಗಿದ್ದಾರೆ.

ತೆಲಂಗಾಣದಲ್ಲಿ ಮಾತ್ರ ಈವರೆಗೆ 51 ಜನರು ಹೀಟ್ ಸ್ಟ್ರೋಕ್‌ಗೆ ಬಲಿಯಾಗಿರುವುದು ಆತಂಕವನ್ನು ಹೆಚ್ಚಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಕ್ಕೆ ಏರಿದ್ದು, ಜನರು ಮನೆಯಿಂದ ಹೊರಬರಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರಂಗಲ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಭಾವ ಕಂಡುಬಂದಿದ್ದು, ಇಲ್ಲಿ 23 ಜನರು ಉಷ್ಣಾಘಾತದಿಂದ ಮೃತಪಟ್ಟಿದ್ದಾರೆ. ಕರೀಂನಗರ ಜಿಲ್ಲೆಯಲ್ಲಿ 11 ಜನರು, ಖಮ್ಮಂನಲ್ಲಿ 7 ಜನರು, ಆದಿಲಾಬಾದ್ ಮತ್ತು ನಲ್ಗೊಂಡ ಜಿಲ್ಲೆಗಳಲ್ಲಿ ತಲಾ 5 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಸಹ ತೀವ್ರ ಬಿಸಿಲಿನ ಹೊಡೆತದಿಂದ ಸಾವನ್ನಪ್ಪಿರುವುದು ವರದಿಯಾಗಿದೆ.

ತೆಲಂಗಾಣ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಸಭೆ ನಡೆಸಿದ್ದಾರೆ. ಅತಿಯಾದ ತಾಪಮಾನ ದಾಖಲಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಪ್ರಮುಖ ರಸ್ತೆಗಳು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುವ ಪ್ರದೇಶಗಳಲ್ಲಿ ಕುಡಿಯುವ ನೀರು, ಮಜ್ಜಿಗೆ ಮತ್ತು ORS ಪ್ಯಾಕೆಟ್‌ಗಳನ್ನು ಲಭ್ಯವಾಗುವಂತೆ ಮಾಡಬೇಕೆಂದು ಸರ್ಕಾರ ಆದೇಶಿಸಿದೆ. ಜೊತೆಗೆ ಗ್ರಾಮ ಮಟ್ಟದ ಸಿಬ್ಬಂದಿ ಜನರಿಗೆ ಜಾಗೃತಿ ಮೂಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆರೋಗ್ಯ ಇಲಾಖೆ ಜನರಿಗೆ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು ಎಂದು ಎಚ್ಚರಿಕೆ ನೀಡಿದೆ. ಸಾಕಷ್ಟು ನೀರು ಸೇವಿಸುವುದು, ಹಗುರವಾದ ಬಟ್ಟೆ ಧರಿಸುವುದು ಮತ್ತು ಬಿಸಿಲಿಗೆ ನೇರವಾಗಿ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.

ತೆಲಂಗಾಣದ 15 ಜಿಲ್ಲೆಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಕೊಥಗುಡೆಮ್ ಜಿಲ್ಲೆಯಲ್ಲಿ ಗರಿಷ್ಠ 46.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

 

Exit mobile version