ಪಾಕ್‌ಗೆ ಆಪರೇಷನ್ ಸಿಂಧೂರದ ಇಂಚಿಂಚು ಮಾಹಿತಿ ರವಾನಿಸುತ್ತಿದ್ದ ಹರಿಯಾಣ ಯುವಕ ಅರೆಸ್ಟ್

Befunky collage 2025 05 17t124210.511

ಚಂಡೀಗಢ: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ, ಪಾಕಿಸ್ತಾನ ಸೇನೆ ಮತ್ತು ಐಎಸ್‌ಐಗೆ (ಪಾಕ್ ಗುಪ್ತಚರ ಸಂಸ್ಥೆ) ರಹಸ್ಯ ಮಾಹಿತಿ ಒದಗಿಸಿದ ಆರೋಪದ ಮೇಲೆ ಹರಿಯಾಣದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ, ಕೈಥಲ್ ಜಿಲ್ಲೆಯ ಮಸ್ತ್‌ಗಢ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಎಂದು ಗುರುತಿಸಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ದೇವೇಂದ್ರ ಸಿಂಗ್, ತಾನು ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ರವಾನಿಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾನೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ ಕೈಥಲ್ ಜಿಲ್ಲಾ ಪೊಲೀಸರು ದೇವೇಂದ್ರನನ್ನು ಬಂಧಿಸಿದ್ದಾರೆ ಎಂದು ಡಿಎಸ್‌ಪಿ ವೀರಭನ್ ತಿಳಿಸಿದ್ದಾರೆ.

ದೇವೇಂದ್ರನ ಬಳಿ ಪತ್ತೆಯಾದ ಎಲೆಕ್ಟ್ರಾನಿಕ್ ಸಾಧನಗಳ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಸಂಪೂರ್ಣ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇವೇಂದ್ರ ಸಿಂಗ್, ಪಂಜಾಬ್‌ನ ಕಾಲೇಜೊಂದರಲ್ಲಿ ಎಂಎ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಗೆ ತೆರಳಿದ್ದ. ಈ ವೇಳೆ ಪಾಕ್ ಗುಪ್ತಚರ ಏಜೆಂಟ್‌ಗಳು ಆತನೊಂದಿಗೆ ಸಂಪರ್ಕ ಸಾಧಿಸಿದ್ದರು. ಅಂದಿನಿಂದ ಆತ ಐಎಸ್‌ಐಗೆ ನಿರಂತರವಾಗಿ ಮಾಹಿತಿ ಒದಗಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

Exit mobile version