ಬೆಳಗಾವಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಚೋರ್ಲಾ ಘಾಟ್‌ನಲ್ಲಿ ಲೂಟಿಯಾಗಿದ್ದು 400 ಕೋಟಿಯಲ್ಲ, 1000 ಕೋಟಿ!

Untitled design 2026 01 25T124632.465

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್‌ನಲ್ಲಿ ನಡೆದ ದೇಶದ ಅತಿದೊಡ್ಡ ದರೋಡೆ ಪ್ರಕರಣ ಈಗ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಈ ಹಿಂದೆ 400 ಕೋಟಿ ರೂಪಾಯಿ ದರೋಡೆ ಎನ್ನಲಾಗುತ್ತಿದ್ದ ಈ ಪ್ರಕರಣದಲ್ಲಿ ಈಗ ಲೂಟಿಯಾದ ಮೊತ್ತ ಬರೋಬ್ಬರಿ 1,000 ಕೋಟಿ ರೂಪಾಯಿ ಎಂದು ದೂರುದಾರ ಸಂದೀಪ್ ಪಾಟೀಲ್ ನೀಡಿದ ಹೇಳಿಕೆ ಇಡೀ ದೇಶದವನ್ನೇ ಬೆಚ್ಚಿಬೀಳಿಸಿದೆ.

ದೂರುದಾರ ಸಂದೀಪ್ ಪಾಟೀಲ್ ಅವರ ಹೇಳಿಕೆಯ ಪ್ರಕಾರ, ಹೈಜಾಕ್ ಆದ ಎರಡು ಕಂಟೇನರ್‌ಗಳಲ್ಲಿ ಬ್ಯಾನ್ ಆಗಿದ್ದ 2,000 ರೂಪಾಯಿ ಮುಖಬೆಲೆಯ ನೋಟುಗಳಿತ್ತು ಎಂದು ತಿಳಿಸಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಈ ಬೃಹತ್ ಮೊತ್ತದ ರದ್ದಾದ ನೋಟುಗಳನ್ನು ಸಾಗಿಸುವಾಗ ಸಂಚು ರೂಪಿಸಿ ದರೋಡೆ ಮಾಡಲಾಗಿದೆ. 2025ರ ಅಕ್ಟೋಬರ್ 16 ರಂದು ನಡೆದ ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣವು ಬೆಳಕಿಗೆ ಬಂದಿದ್ದೇ ಒಂದು ಸಾಹಸಮಯ ಕಥೆ. ಕಂಟೇನರ್ ನಾಪತ್ತೆಯಾದ ನಂತರ, ಹಣದ ಮಾಲೀಕರಾದ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಶೇಟ್ ತನ್ನ ಸ್ನೇಹಿತ ಸಂದೀಪ್ ಪಾಟೀಲ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸಂದೀಪ್‌ನನ್ನು ಅಪಹರಿಸಿದ ಕಿಶೋರ್ ಸಹಚರರು, ಸುಮಾರು ಒಂದೂವರೆ ತಿಂಗಳ ಕಾಲ ಕೂಡಿಟ್ಟು ಗನ್ ಪಾಯಿಂಟ್‌ನಲ್ಲಿ ಚಿತ್ರಹಿಂಸೆ ನೀಡಿದ್ದರು. ಲೂಟಿಯಾದ 1000 ಕೋಟಿ ಕೊಡದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಹೇಗೋ ಮಾಡಿ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್, ಈಗ ಮಹಾರಾಷ್ಟ್ರದ ಇಬ್ಬರು ಪೊಲೀಸರಿಂದಲೂ ತನಗೆ ಜೀವ ಬೆದರಿಕೆ ಇದೆ ಎಂದು ವಿಡಿಯೋ ಹೇಳಿಕೆ ನೀಡಿ ರಕ್ಷಣೆ ಕೋರಿದ್ದಾರೆ.

ಬೆಳಗಾವಿಯ ಗಡಿಯಲ್ಲಿ ನಡೆದ ಈ ಮಹಾ ದರೋಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೂಡಲೇ ವಿಶೇಷ ತನಿಖಾ ದಳ (SIT) ರಚನೆಗೆ ಆದೇಶಿಸಿದ್ದಾರೆ. ದರೋಡೆಯಾದ ಹಣವು ಉದ್ಯಮಿಯೊಬ್ಬರಿಗೆ ಸೇರಿದ್ದೇ ಅಥವಾ ರಾಜಕೀಯ ನಂಟಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಸದ್ಯ ನಾಸಿಕ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕಣ್ಮರೆಯಾಗಿರುವ ಕಂಟೇನರ್‌ಗಳ ಪತ್ತೆಗಾಗಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಂದೆಡೆ 1000 ಕೋಟಿ ರೂಪಾಯಿ ದರೋಡೆಯಾಗಿದೆ ಎಂಬ ದೂರುದಾರನ ಹೇಳಿಕೆ, ಇನ್ನೊಂದೆಡೆ ರದ್ದಾದ ನೋಟುಗಳ ಸಾಗಾಟದ ಗಂಭೀರ ಆರೋಪ, ಈ ಎರಡೂ ಅಂಶಗಳು ಪೊಲೀಸರಿಗೆ ದೊಡ್ಡ ಸವಾಲಾಗಿವೆ. ತನಿಖೆಯ ನಂತರವಷ್ಟೇ ಈ 1000 ಕೋಟಿ ರೂಪಾಯಿಗಳ ರಹಸ್ಯ ಬಯಲಾಗಬೇಕಿದೆ.

Exit mobile version