ಇಂದಿನ ಕಾಲದಲ್ಲಿ ಸರಿಯಾದ ಜೀವನಸಂಗಾತಿಯನ್ನು ಹುಡುಕುವುದು ಒಂಥರಾ ಸವಾಲಿನ ಕೆಲಸ. ಅದರಲ್ಲೂ ಅರೇಂಜ್ ಮ್ಯಾರೇಜ್ (Arrange Marriage) ವಿಷಯಕ್ಕೆ ಬಂದರೆ ಗೊಂದಲಗಳು ಸಾಮಾನ್ಯ. ಹುಡುಗನಿಗೆ ಇಷ್ಟವಾದರೆ ಮನೆಯವರಿಗೆ ಇಷ್ಟವಾಗಲ್ಲ, ಮನೆಯವರು ಓಕೆ ಅಂದರೂ ಹುಡುಗಿಗೆ ಹೊಂದಾಣಿಕೆಯಾಗಲ್ಲ. ಈ ‘ಮ್ಯಾಟ್ರಿಮೋನಿಯಲ್’ನಲ್ಲಿ ಸಿಕ್ಕವರನ್ನ ನಂಬಲು ಕಷ್ಟ..! ಹೀಗಾಗಿ ಹರಿಯಾಣದ ಡೇಟಾ ಅನಾಲಿಸ್ಟ್ ಒಬ್ಬರು ಈ ಸಮಸ್ಯೆಗೆ ತಮ್ಮದೇ ಆದ ಶೈಲಿಯಲ್ಲಿ ಟೆಕ್ನಿಕಲ್ ಪರಿಹಾರ ಕಂಡುಕೊಂಡಿದ್ದಾರೆ.
28ರ ಹರೆಯದ ಟೆಕ್ಕಿಯ ‘ಮದುವೆ ಟ್ರ್ಯಾಕರ್’
ಈ ಸಂಂಬಂಧ ಹರಿಯಾಣ ಮೂಲದ 28 ವರ್ಷದ ವಿಕಾಸ್ ಎಂಬುವವರು ಒಂದು ಪ್ರಯೋಗ ಮಾಡಿದ್ದಾರೆ. ವೃತ್ತಿಯಲ್ಲಿ ಡೇಟಾ ಅನಾಲಿಸ್ಟ್ ಆಗಿರುವ ವಿಕಾಸ್, ಅರೇಂಜ್ ಮ್ಯಾರೇಜ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಒಂದು ಸಮಗ್ರವಾದ ಸ್ಪೆಡ್ಶೀಟ್ (Spreadsheet) ಸಿದ್ಧಪಡಿಸಿದ್ದಾರೆ.
ಏನಿದೆ ಈ ಸ್ಪೆಡ್ಶೀಟ್ನಲ್ಲಿ?
ಮನೆಯವರು ದಿನಕ್ಕೊಂದು ಬಯೋಡೇಟಾ ತರುತ್ತಿದ್ದರೆ, ಯಾರ ಬಗ್ಗೆ ಏನು ಮಾತಾಡಿದ್ದೆವು ಎಂಬುದು ಮರೆತು ಹೋಗುವುದು ಸಹಜ. ಈ ಗೊಂದಲ ತಪ್ಪಿಸಲು ವಿಕಾಸ್ ತಮ್ಮ ಎಕ್ಸೆಲ್ ಶೀಟ್ನಲ್ಲಿ ಈ ಕೆಳಗಿನ ಕಾಲಂಗಳನ್ನು ಸಿದ್ಧಪಡಿಸಿದ್ದಾರೆ:
-
ವಧುವಿನ ಹೆಸರು ಮತ್ತು ವಿವರ: ಮೂಲಭೂತ ಮಾಹಿತಿ.
-
ಫೋನ್ ಕರೆಗಳ ವಿವರ: ಎಷ್ಟು ಬಾರಿ ಮಾತನಾಡಲಾಗಿದೆ ಮತ್ತು ಯಾವ ಸಮಯದಲ್ಲಿ ಮಾತನಾಡಲಾಗಿದೆ ಎಂಬ ಮಾಹಿತಿ.
-
ಕುಟುಂಬದ ಅಭಿಪ್ರಾಯ: ಹುಡುಗಿಯ ಮನೆಯವರ ಬಗ್ಗೆ ವಿಕಾಸ್ ಪೋಷಕರ ನಿಲುವೇನು ?
-
ವಧುವಿನ ಪ್ರತಿಕ್ರಿಯೆ: ಮಾತುಕತೆಯ ವೇಳೆ ಹುಡುಗಿ ನೀಡಿದ ಆಸಕ್ತಿ ಅಥವಾ ಪ್ರತಿಕ್ರಿಯೆ.
-
ಮಾತುಕತೆಯ ಹಂತ: ಸದ್ಯ ಪ್ರಕ್ರಿಯೆ ಯಾವ ಹಂತದಲ್ಲಿದೆ? (ವೇಟಿಂಗ್, ರಿಜೆಕ್ಟೆಡ್, ಪ್ರೋಗ್ರೆಸ್ ಇತ್ಯಾದಿ).
ವೈರಲ್ ಆದ ವಿಕಾಸ್ ಐಡಿಯಾ
ಸುಮಾರು ಐದು ತಿಂಗಳ ಹಿಂದೆ ವಧುವಿನ ಹುಡುಕಾಟ ಆರಂಭಿಸಿದ ವಿಕಾಸ್, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೊ ಹಂಚಿಕೊಂಡಿದ್ದಾರೆ. ಅರೇಂಜ್ ಮ್ಯಾರೇಜ್ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿರುತ್ತದೆ. ಪೋಷಕರು ಕಳುಹಿಸುವ ಬಯೋಡೇಟಾಗಳಿಗೆ ಅಂದೇ ಪ್ರತಿಕ್ರಿಯೆ ನೀಡಬೇಕು. ಹೀಗಿರುವಾಗ ಟ್ರ್ಯಾಕರ್ (Tracker) ಇಟ್ಟುಕೊಳ್ಳುವುದು ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಉದ್ಯೋಗದ ಸಂದರ್ಭದಲ್ಲಿ ಪ್ರಾಜೆಕ್ಟ್ಗಳನ್ನು ಟ್ರ್ಯಾಕ್ ಮಾಡಲು ಈ ವಿಧಾನ ಬಳಸಲಾಗುತ್ತದೆ. ಆದರೆ, ಮದುವೆಯಂತಹ ಭಾವನಾತ್ಮಕ ವಿಷಯಕ್ಕೆ ‘ಡೇಟಾ ಶೀಟ್’ ಬಳಸುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಇದನ್ನು ಬುದ್ಧಿವಂತಿಕೆಯ ನಡೆ ಎಂದರೆ, ಇನ್ನು ಕೆಲವರು ಮದುವೆಯಲ್ಲೂ ಇಷ್ಟೊಂದು ಲೆಕ್ಕಾಚಾರವೇ ? ಎಂದು ತಮಾಷೆ ಮಾಡುತ್ತಿದ್ದಾರೆ.





