GST ಸ್ಲ್ಯಾಬ್‌ನಲ್ಲಿ ದೊಡ್ಡ ಬದಲಾವಣೆ: ಯಾವ ವಸ್ತುಗಳ ಬೆಲೆ ಇಳಿಕೆ?

Untitled design (85)

ನವದೆಹಲಿ: ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಜನರ ತೆರಿಗೆ ಭಾರವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಸರಕು ಮತ್ತು ಸೇವಾ ತೆರಿಗೆ (GST) ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ ತರುವ ಯೋಜನೆಯನ್ನು ಪರಿಶೀಲಿಸುತ್ತಿದೆ. ಮೂಲಗಳ ಪ್ರಕಾರ, ಸರ್ಕಾರವು 12% GST ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಈ ಶ್ರೇಣಿಯಲ್ಲಿರುವ ವಸ್ತುಗಳನ್ನು 5% ತೆರಿಗೆ ಶ್ರೇಣಿಗೆ ವರ್ಗಾಯಿಸುವ ಚಿಂತನೆಯಲ್ಲಿದೆ.

12% GST ಸ್ಲ್ಯಾಬ್‌ನಲ್ಲಿ ಯಾವ ವಸ್ತುಗಳಿವೆ?

12% ಜಿಎಸ್‌ಟಿ ಶ್ರೇಣಿಯಲ್ಲಿ ದೈನಂದಿನ ಬಳಕೆಯ ಹಲವು ವಸ್ತುಗಳಿವೆ. ಇವುಗಳಲ್ಲಿ ಆಹಾರ ಸಂಬಂಧಿತ ವಸ್ತುಗಳಾದ ಬೆಣ್ಣೆ, ಚೀಸ್, ತುಪ್ಪ, ಒಣಗಿದ ಹಣ್ಣುಗಳು, ಫ್ರೂಟ್ ಜಾಮ್, ಜೆಲ್ಲಿ, ಮಾರ್ಮಲೇಡ್, ಪಿಜ್ಜಾ ಬ್ರೆಡ್, ಪಾಸ್ತಾ, ಕಾರ್ನ್ ಫ್ಲೇಕ್ಸ್, ಫ್ರೂಟ್ ಜ್ಯೂಸ್, ತರಕಾರಿ ರಸ, ಖಾದ್ಯ ತೈಲ ಸೇರಿವೆ. ಇದರ ಜೊತೆಗೆ ಟೂತ್‌ಪೇಸ್ಟ್, ಸಾಬೂನು, ಹೇರ್ ಆಯಿಲ್, ಶಾಂಪೂ, ಒಣಗಿದ ಮೆಹಂದಿ, ಅಗರಬತ್ತಿ, ಮೇಣದಬತ್ತಿಗಳು, ಫೊಟೊ ಫ್ರೇಮ್, ಗಾಜಿನ ಸಾಮಾನುಗಳು, ತಾಮ್ರದ ಒಡವೆಗಳು, 1,000 ರೂ.ಗಿಂತ ಕಡಿಮೆ ಮೌಲ್ಯದ ಗಾರ್ಮೆಂಟ್ಸ್, ಕೆಲವು ರೀತಿಯ ಫರ್ನಿಚರ್ (ಉದಾಹರಣೆಗೆ ಮರದ ಫರ್ನಿಚರ್), ಎಲೆಕ್ಟ್ರಿಕಲ್ ಟ್ರಾನ್ಸ್‌ಫಾರ್ಮರ್‌ಗಳು, ಸೈಕಲ್‌ಗಳು, ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಮತ್ತು ಕಾಗದದ ಉತ್ಪನ್ನಗಳು ಸೇರಿವೆ.

ಸೇವೆಗಳ ವಿಷಯದಲ್ಲಿ, ರೈಲ್ವೆ ಟಿಕೆಟ್‌ಗಳು (ನಾನ್-ಎಸಿ ಕೋಚ್‌ಗಳು, ಸ್ಲೀಪರ್ ಕ್ಲಾಸ್), ಏರ್ ಟಿಕೆಟ್‌ಗಳು (ಎಕಾನಮಿ ಕ್ಲಾಸ್), ಹೋಟೆಲ್‌ಗಳು (ರೂಮ್ ಟಾರಿಫ್ 1,000 ರಿಂದ 7,500 ರೂ.ವರೆಗೆ), ರೆಸ್ಟೋರೆಂಟ್ ಸೇವೆಗಳು (ನಾನ್-ಎಸಿ, ಲೈಸೆನ್ಸ್‌ಡ್ ಬಾರ್‌ಗಳಿಲ್ಲದವು), ಒಡವೆ ತಯಾರಿಕೆ ಸೇವೆಗಳು, ಮತ್ತು 750 ರೂ.ಗಿಂತ ಕಡಿಮೆ ಮೌಲ್ಯದ ಚಲನಚಿತ್ರ ಟಿಕೆಟ್‌ಗಳು 12% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ.

ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಬದಲಾವಣೆ

12% ಜಿಎಸ್‌ಟಿ ಸ್ಲ್ಯಾಬ್‌ನಲ್ಲಿರುವ ಈ ವಸ್ತುಗಳು ಮತ್ತು ಸೇವೆಗಳನ್ನು 5% ಶ್ರೇಣಿಗೆ ವರ್ಗಾಯಿಸಿದರೆ, ಇವುಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಉದಾಹರಣೆಗೆ, ದೈನಂದಿನ ಬಳಕೆಯ ಆಹಾರ ವಸ್ತುಗಳಾದ ತುಪ್ಪ, ಚೀಸ್, ಜಾಮ್, ಮತ್ತು ಟೂತ್‌ಪೇಸ್ಟ್‌ನಂತಹ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಇದೇ ರೀತಿ, ರೈಲ್ವೆ ಮತ್ತು ವಿಮಾನ ಟಿಕೆಟ್‌ಗಳು, ಹೋಟೆಲ್‌ಗಳು, ಮತ್ತು ರೆಸ್ಟೋರೆಂಟ್ ಸೇವೆಗಳ ಬೆಲೆಯೂ ಕಡಿಮೆಯಾಗುವ ಸಾಧ್ಯತೆಯಿದೆ, ಇದು ಸಾಮಾನ್ಯ ಜನರಿಗೆ ಪ್ರಯಾಣ ಮತ್ತು ಜೀವನಶೈಲಿಯ ವೆಚ್ಚವನ್ನು ತಗ್ಗಿಸಲಿದೆ.

ಈ ಪ್ರಸ್ತಾವನೆಯ ಬಗ್ಗೆ ಅಂತಿಮ ನಿರ್ಧಾರವನ್ನು ಮುಂಬರುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಈ ಮಂಡಳಿಯು ತೆರಿಗೆ ದರಗಳ ಬದಲಾವಣೆಗೆ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ಸಾಮಾನ್ಯವಾಗಿ, ಕೌನ್ಸಿಲ್ ಸಭೆಗೆ 15 ದಿನಗಳ ಮುಂಚಿತವಾಗಿ ಸೂಚನೆ ನೀಡಬೇಕಾಗುತ್ತದೆ.

ಮಧ್ಯಮ ವರ್ಗಕ್ಕೆ ರಿಯಾಯತಿ

ಕಳೆದ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಮಧ್ಯಮ ವರ್ಗಕ್ಕೆ ಒಂದು ರಿಯಾಯಿತಿಯನ್ನು ಒದಗಿಸಿತ್ತು. ಈಗ ಜಿಎಸ್‌ಟಿ ದರಗಳ ಕಡಿತದ ಈ ಯೋಜನೆಯು ಜನರಿಗೆ ಇನ್ನಷ್ಟು ಆರ್ಥಿಕ ನೆರವನ್ನು ನೀಡಲಿದೆ. 12% ಜಿಎಸ್‌ಟಿಯಿಂದ 5% ಜಿಎಸ್‌ಟಿಗೆ ಇಳಿಕೆಯಾದರೆ, ದೈನಂದಿನ ಜೀವನದ ವೆಚ್ಚದಲ್ಲಿ ಉಳಿತಾಯವಾಗಲಿದೆ.

Exit mobile version